Bhasaka
← Back to home

ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು 

Author: ಕನಕದಾಸCategory: ಇತರೆRaaga: ಕಾಂಬೋಧಿTaala: ಝಂಪೆತಾಳ
ಕಲಿಯುಗದ ಮಹಿಮೆಯನು ಕಂಡಷ್ಟು ಪೇಳುವೆನು ||ಪ|| ಜಲಜನಾಭನ ಕೃಪೆಯ ಪಡೆದವರು ಕೇಳಿ ||ಅ|| ಸತ್ಯಧರ್ಮಗಳೆಲ್ಲ ಎತ್ತ ಪೋದವೊ ಕಾಣೆ ಉತ್ತಮರ ಜೀವನಕೆ ದಾರಿಯಿಲ್ಲ ನಿತ್ಯದಲಿ ಕಳವು ವ್ಯಭಿಚಾರವುಳ್ಳವರೆಲ್ಲ ಅರ್ಥ ಸಂಪನ್ನರಾಗನುಭವಿಸುತಿಹರು ||1|| ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯು ಆಗಿ ಪುತ್ರ ಪಿತನಾಗಿ ಪಿತ ಪುತ್ರನಾಗಿ ಮತ್ತೆ ಗಂಡನಿಗೆ ಹೆಂಡತಿಯೆ ಗಂಡಳು ಆಗಿ ವರ್ತಿಸುವರಯ್ಯ ತಮಗೆದುರಿಲ್ಲವೆಂದು ||2|| ವಾವೆವರಸೆಯು ತಪ್ಪಿ ವೈರಿ ವರ್ಗವು ಹೆಚ್ಚಿ ದೇವ ಬ್ರಾಹ್ಮಣ ಗುರು ಹಿರಿಯರನು ಜರಿದು ಕೇವಲಾಧಮರೆಲ್ಲ ಸಿರಿ ಮದದಿ ಸೊಕ್ಕಿದರು ಕಾವರಾರೈ ಸಾಧು ಸಜ್ಜನರನೀಗ ||3|| ವೇದ ವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದು ಆಧಾರವಿಲ್ಲದೆ ತಿರಿದು ತಿಂಬುವರು ಕಾದುವ ಶೂರರಿಗೆ ಕಾಸು ಕೊಡುವವರಿಲ್ಲ ಮೇದಿನಿಗೆ ಬೀಳ್ವ ಮಳೆ ಖಂಡಮಂಡಲವು ||4|| ಅನ್ನವಸ್ತ್ರಗಳಿಂದ ಚೆನ್ನಾಗಿ ಬಾಳುವರ ಭಿನ್ನ ತಂತ್ರವ ಮಾಡಿ ಕೆಡಿಸುತಿಹರು ಗನ್ನಗತಕವ ಮಾಳ್ಪ ಗ್ರಾಮಣ್ಯಗಳ ಕಲಿತು ಕುನ್ನಿಗಳು ಹೆಚ್ಚಿದರು ಕ್ರೂರ ಫಣಿಯಂತೆ ||5|| ಆಳಿದೊಡೆಯಂಗೆರಡು ಬಗೆಯುವಾತಗೆ ಒಳ್ಳೆ ಮಾಳಿಗೆಯ ಮನೆ ತುರುವು ಧನಧಾನ್ಯವು ವೇಳೆವೇಳೆಗೆ ಬರುವ ಹೆಂಡತಿಯ ಲೆಕ್ಕಿಸದೆ ಸೂಳೆಯನು ನೆಚ್ಚಿ ಕಾಲವ ಕಳೆವರಯ್ಯ ||6|| ಸೇರಿ ದ್ರೋಹವ ಮಾಳ್ಪ ಕ್ರೂರಕರ್ಮಿಗಳ ಮತ ಪೂರೈಸಿ ಕೊಡುವರರಸುಗಳೆಲ್ಲರು ಧಾರಿಣಿಯ ಭಾರವನು ತಾಳಲಾರದೆ ದೇವಿ ಶ್ರೀರಾಮ ರಾಮೆಂದು ಶಿರವ ತೂಗುವಳು ||7|| ಉತ್ತಮ ಪತಿವ್ರತೆಯು ಪತಿ ನೀನೆ ಗತಿಯೆನಲು ಮುತ್ತೈದೆಗುಡುವುದಕೆ ವಸ್ತ್ರವಿಲ್ಲ ಮತ್ತೆ ವ್ಯಭಿಚಾರಿಣಿಗೆ ತೊಡಿಗೆ ಬಂಗಾರಗಳು ವರ್ತನೆಯಿದೇನಯ್ಯ ಕಲಿಯುಗದ ಮಹಿಮೆ ||8|| ಪತಿವ್ರತೆಯರೆಂಬುವರು ಶತಸಹಸ್ರಕೊಬ್ಬರು ಮಿತಿಮಿರಿ ಇಹರಯ್ಯ ಇತರ ಜನರು ಮತಿಗೆಟ್ಟು ಮನಸೋತು ಅನ್ಯ ಪುರುಷರ ಕೂಡಿ ಗತಿಗೆಟ್ಟು ಹೋಗುವರು ಮೂರು ತೊರೆದು ||9|| ಹರಿಹರರ ಪೂಜೆಗಳು ಹಗರಣಗಳಾದವು ಉರಿ ಮಾರಿ ಚಾಮುಂಡಿ ಶಕ್ತಿಗಳಿಗೆ ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ ಪರಮ ಭಕ್ತಿಯ ಸಲಿಸಿ ಪೂಜಿಸುವರಯ್ಯ ||10|| ನಡೆವ ಕಾರ್ಯಗಳೆಲ್ಲ ನುಡಿಯಲೆನ್ನಳವಲ್ಲ ಒಡೆಯ ನೀನೇ ಬಲ್ಲೆ ಕಲಿಯುಗದ ಮಹಿಮೆ ತಡವ ಮಾಡಲಿ ಬೇಡ ತಾಳಲಾರದು ಲೋಕ ಮೃಡನ ವೈರಿಯ ಪೆತ್ತ ಆದಿಕೇಶವನೆ ||11||

Thoughts & Reflections

0

No reflections shared yet. Be the first to share your thoughts!

Share your thought