Bhasaka
← Back to home

ಗುರು ಹಿರಿಯರ ಸೇವಿಸಿ

Author: ಕನಕದಾಸCategory: ವೈರಾಗ್ಯRaaga: ಕಾಂಬೋಧಿTaala: ಝಂಪೆತಾಳ
ಗುರು ಹಿರಿಯರ ಸೇವಿಸಿ ಹರಿಯ ಮನದೊಳಗಿರಿಸಿ ಪರಗತಿಯ ಬೇಗ ಸಾಧಿಸಿಕೊಳ್ಳಿರೊ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆ ಸಿಕ್ಕಿ ಬಹುಕಾಲ ಬಳಲದೆ ರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆ ಯಿಕ್ಕದಂಥವನ ಮೊರೆ ಹೋಗಿರೊ ||1|| ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲ ತುಂಬಿರುವ ಸುಖವೆಲ್ಲ ದುಃಖಭರಿತ ಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ ನುಂಬ ಭ್ರಮರಕೆ ಸರಿಗಾಣೆನೊ ||2|| ಮಕ್ಕಳುಗಳಳುವಾಗ ಮಡದಿಯರು ಜರಿವಾಗ ಬಿಕ್ಕುಗಳು ಬಂದು ಬೈವಾಗ ಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆ ಸೌಖ್ಯವೆತ್ತಣದೊ ಮನುಜರಿಗೆ ||3|| ತಾಯ ಮಾರಿ ತೊತ್ತನು ಕೊಂಬ ಪಾಮರರಂತೆ ಹೇಯ ಕುಜನರಾ ಚರಣಕೆರಗಿ ಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನ ಆಯುಷ್ಯ ಬರಿದೆ ಹೋಯಿತಲ್ಲ ||4|| ಅಯಿವರಿತ್ತೊಡವೆಯ ಅವರವರೊಯ್ಯುವರು ಮ- ತ್ತಯಿವರೆಂಬುವರು ತೊಲಗುವರು ಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮ ಕೈಯ ಪಿಡಿದೆತ್ತುವರ ನಾನು ಕಾಣೆ ||5|| ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬ ಕಾಲನ ಭಟರು ಬಂದು ಕವಿದು ಸಾಲಾಗಿ ನಿಂತಾಗ ಮುಖ ಗಂಟಲೊಳಗಣ ನಾಲಗೆಯ ನಾದ ಎಲ್ಲಿಹುದೊ ||6|| ಆಗಲೇ ಹರಿನಾಮ ನಾದದಿಂದೆಚ್ಚತ್ತು ನಾಗಶಯನನ ಪುರದ ಪಥವ ಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆ ಈ ಗಾಳಿ ದೀಪ ಸ್ಥಿರವಲ್ಲ ||7|| ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆ ಶರೀರದ ಸಂಬಂಧಗಳಕಟಾ ತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆ ಬರಿದೆ ಭವದಲ್ಲಿ ಬಳಲುವಿರಿ ||8|| ವೇದ ಶಾಸ್ತ್ರವನೋದಲಿಲ್ಲ ಜಪ ಹೋಮಾದಿ ಸಾಧು ಕರ್ಮಗಳ ಸರಕು ಇಲ್ಲ ಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿ ಪಾದ ತೀರ್ಥದಾ ವ್ರತಗಳಿಲ್ಲ ||9|| ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲ ಪದ್ಮ ತುಳಸಿಯಾ ಸರಗಳಿಲ್ಲ ಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳು ಬಿದ್ದು ಪೊರಳುವ ಮರುಳಿದೆತ್ತ ||10|| ಏಕಾದಶಿಯ ಮಾಡಿ ಯತಿಗಳೊಡನೆ ಆಡಿ ಪೋಕ ವೃತ್ತಿಗಳನೀಡಾಡಿ ಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿ ಆ ಕೃಷ್ಣನಂಘ್ರಿಗಳ ಪಾಡಿ ||11|| ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕ ಭುಕ್ತಿಗಳ ಮೇಲುಗುಳಿ ದೂರ ನಿಲ್ಲಿ ಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿ ಮುಕ್ತಿ ಮಾರ್ಗದಲಿನ್ನು ತೆರಳಿ ||12|| ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನ ಕಳ್ಳರೈವರ ಕಾರಣದಿಂದ ಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನ ಫುಲ್ಲನಾಭನ ಅಡಿಗೆ ಮೊರೆ ಹೋಗಿರೊ||13|| ಮಲಮೂತ್ರ ರಕ್ತ ಮಾಂಸಗಳ ಬಂಬಲು ಮೆತ್ತಿ ಎಲುಬಿನಾ ಬಲದಿಂದ ಗೂಡು ಮಾಡಿ ಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟು ನಳಿನನಾಭನ ಪಾದ ಸೇರಿರೋ ||14|| ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿ ತುಂಬಿರುವ ವಾಯು ಸ್ಥಿರವಲ್ಲ ನಂಬಿದರ ಪೊರೆವ ನೆಲೆಯಾದಿಕೇಶವನ ಪಾ ದಾಂಬುಜವನು ಸೇರಿ ಬದುಕಿರೊ ||15||

Thoughts & Reflections

0

No reflections shared yet. Be the first to share your thoughts!

Share your thought