Bhasaka
← Back to home

ಗೋವಿಂದ ಗೋವಿಂದ ಎನ್ನಲರಿಯದೆ

Author: ಕನಕದಾಸCategory: ಶ್ರೀಕೃಷ್ಣRaaga: ಸಾವೇರೀTaala: ಏಕತಾಳ
ಗೋವಿಂದ ಗೋವಿಂದ ಎನ್ನಲರಿಯದೆ- ವೃಥಾ ನೋವಿಂದ ಭಂಗವ ಪಡುವುದುಚಿತವೆ? ||ಪ|| ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿ ಕೋಣಗಳ ತಲೆಚೆಂಡ ಕುಟ್ಟಿಸುತ ಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ- ನಾರಾ ಯಣನ ನಾಮಸ್ಮರಣೆ ಮಾಡು ಮನವೆ ||1|| ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿ ಕುಂಡವನು ಹೊಕ್ಕು ಹೊರಡುವುದುಚಿತವೆ ಭಂಡರಂದದಿ ಬತ್ತಲೆಯೆ ಬರುವುದಾವಾಟ ಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ ||2|| ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನು ಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನು ಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆ ಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ ||3|| ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡು ಹಗಲಿರುಳು ಅನ್ನಪಾನಕೆ ಹೋಗದೆ ಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟ ಜಗದಾಧಿಪತಿಯ ನಾಮ ಸ್ಮರಿಸು ಮರುಳೆ ||4|| ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆ ಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ ||5|| ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವು ಅದರಿಂದ ಫಲವೇನು ಪೇಳಿರಯ್ಯ ನಾದವನು ಕೇಳ್ದ ಹರಿಣದಂದದಿ ಕೆಡದೆ ಮಧು ಸೂದನನ ನಾಮ ಸ್ಮರಣೆಯ ಮಾಡು ಮರುಳೆ ||6|| ನಿಂದಾಪವಾದ ಘಟಿಸುವುದೈಸೆ ಇದರಿಂದ ಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆ ತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮ ಒಂದೇ ವೈಕುಂಠಪದವನೈದಿಪುದಯ್ಯ ||7||

Thoughts & Reflections

0

No reflections shared yet. Be the first to share your thoughts!

Share your thought