Bhasaka
← Back to home

ಜಗದಂತರ್ಯಾಮಿಯೆಂದೆನುತ ನಿನ್ನ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಝಂಪೆತಾಳ
ಜಗದಂತರ್ಯಾಮಿಯೆಂದೆನುತ ನಿನ್ನ ನಿಗಮ ಸಾರುವ ಮಾತು ಪುಸಿಯೆ ರಂಗ ||ಪ|| ಭೇದವಿಲ್ಲದೆ ಸಕಲ ಜೀವರನು ಪೊತ್ತಿಹಳು ಭೂದೇವಿಯೆಂಬಾಕೆ ನಿನ್ನ ಅರ್ಧಾಂಗಿಯು ಸಾಧನವು ಸಕಲ ಸಿರಿ ಸಂಪತ್ತುಗಳನೀವ ಶ್ರೀದೇವಿ ನಿನ್ನ ಹಿರಿಯರಸಿಯೋ ದೇವ ||1|| ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳನ್ನು ಬೊಂಬೆಗಳ ಮಾಡಿ ಭವರಂಗದಲಿ ತುಂಬಿ ಕಲೆಗಳನೊತ್ತಿ ನೊಸಲ ಬರೆಹವ ಬರೆವ ಅಂಬುಜೋದ್ಭವ ನಿನ್ನ ಹೆಮ್ಮಗನು ದೇವ ||2|| ಸಕಲ ಜೀವರಾಶಿಗಳನು ಕಲ್ಪಿಸುವ ಬೀಜ ಸುಖದಿಂದ ಮಾಯಾಂಗನೆಯರೊಡಲೊಳು ಅಕ್ಕರದಿ ಪಿಂಡಾಂಡಗಳ ಕಟ್ಟಿ ಬಲಿಸುವ ಮಕರಾಂಕ ನಿನ್ನ ಕಿರಿಮಗ ದೇವ ||3|| ರಾಮನಾಮವ ಜಪಿಸಿ ಪರಮ ವೈಷ್ಣವನಾಗಿ ಹೇಮಗಿರಿ ಸನಿಹ ಸಾಹಸ್ರನಾಮ ಪ್ರೇಮದಲಿ ಜಪಿಸುತ್ತ ವೈರಾಗ್ಯನಿಧಿಯಾದ ಸೋಮಶೇಖರನು ನಿನ್ನ ಮೊಮ್ಮಗನು ||4|| ಜಂಗಮ ಸ್ಥಾವರಕಾಧಾರವಾಗಿಹಳು ಭಂಗಪಡುವ ಜನರ ಕರ್ಮವ ಕಳೆವಳು ಹಿಂಗದೆ ಜಗವ ಪಾವನವ ಮಾಡುವ ಪುಣ್ಯ ಗಂಗೆಯೆಂಬಾಕೆ ನಿಮ್ಮಯ ಮಗಳು ದೇವ ||5|| ಶುದ್ಧ ಬುದ್ಧಿಯನುಳ್ಳ ಪ್ರದ್ಯುಮ್ನನಾ ಮಗಳು ಶ್ರದ್ಧೆಯೆನಿಸಿಕೊಂಡು ಸೂತ್ರಗೆ ಸತಿಯಾಗಿ ಸದ್ಯೋಜಾತನ ಪಡೆದು ಪ್ರಸಿದ್ಧವಹ ದೇವಿ ಈ ಧರೆಯೊಳು ಪುಟ್ಟಿ ನಿನ್ನ ದಾಸಿಯಾದಳು ||6|| ಇಂತು ಅಣುರೇಣು ತೃಣಕಾಷ್ಟದೊಳಗೆಲ್ಲ ಸಂತೋಷವಾಗಿಹುದು ನಿನ್ನ ಸ್ಮರಣೆ ಯಂತ್ರವಾಹಕನೆಂಬ ಬಿರುದು ಸಲುವುದು ನಿನಗೆ ಕಂತುಪಿತ ಕಾಗಿನೆಲೆಯಾದಿಕೇಶವನೆ ||7||

Thoughts & Reflections

0

No reflections shared yet. Be the first to share your thoughts!

Share your thought