Bhasaka
← Back to home

ತಿಳಿಯ ಬರದೆಲೆ ಮನವೆ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಆಟತಾಳ
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ||ಪ|| ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ||ಅ|| ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆ ವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆ ಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವ ನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ ||1|| ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆ ಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆ ಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವ ಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ ||2|| ಪಟ್ಟೆ ಪಟ್ಟಾವಳಿ ದುಕೂಲವನು ನಾನೊಲ್ಲೆ ಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆ ಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವ ಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ ||3|| ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆ ಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆ ನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವ ತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ ||4|| ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆ ದೇಶಾನುದೇಶಗಳ ತಿರುಗಾಟ ನಾನೊಲ್ಲೆ ಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವ ಕಸಗೌಡಿಯ ಮಗನ ಮಗನ ಮಗನೆನಿಸೆನ್ನ ||5||

Thoughts & Reflections

0

No reflections shared yet. Be the first to share your thoughts!

Share your thought