Bhasaka
← Back to home

ತೀರ್ಥ ಪೀಡಿದವರೆಲ್ಲ ತಿರುನಾಮಧಾರಿಗಳೆ

Author: ಕನಕದಾಸCategory: ಇತರೆRaaga: ಶಂಕರಾಭರಣTaala: ಆದಿತಾಳ
ತೀರ್ಥ ಪೀಡಿದವರೆಲ್ಲ ತಿರುನಾಮಧಾರಿಗಳೆ- ಜನ್ಮ ||ಪ|| ಸಾರ್ಥಕವಿಲ್ಲದವರೆಲ್ಲ ಭಾಗವತರೆ ||ಅ|| ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ ನಿಗಮಾಗಮ ಪುರಾಣಗಳನೋದಿ ತಿಳಿದು ಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥ ಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ? ||1|| ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆ ಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥ ಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ? ||2|| ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆ ಅಂಗಲಿಂಗದ ನೆಲೆಯ ಗುರುತರಿಯದೆ ಜಂಗಮ ಸ್ಥಾವರದ ಹೊಲಬನರಿಯದ ಇಂಥ ಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ? ||3|| ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆ ಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆ ಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥ ಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ? ||4|| ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟು ಆಸೆಯನು ತೊರೆಯದೆಯೆ ತಪಕೆ ಕುಳಿತು ವಾಸನೆಯ ಗುರುತಿನಾ ಹೊಲಬನರಿಯದ ಇಂಥ ವೇಷಧಾರಿಗಳೆಲ್ಲ ಸಂನ್ಯಾಸಿಗಳೆ? ||5|| ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿ ಮೂರು ಮೂರ್ತಿಯ ಮೂರು ಕಡೆಯೊಳಿರಿಸಿ ಮಾರ ಪಿತನಹ ಕಾಗಿನೆಲೆಯಾದಿ ಕೇಶವನ ಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ? ||6||

Thoughts & Reflections

0

No reflections shared yet. Be the first to share your thoughts!

Share your thought