Bhasaka
← Back to home

ದಾಸನಾಗೋ ಭವಪಾಶನೀಗೋ

Author: ಕನಕದಾಸCategory: ಶ್ರೀಕೃಷ್ಣRaaga: ಹಿಂದೂಸ್ತಾನಿ ಕಾಫಿTaala: ಏಕತಾಳ
ದಾಸನಾಗೋ ಭವಪಾಶನೀಗೋ- ವಿಶೇಷನಾಗೋ ||ಪ|| ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲ ಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲ ಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ- ಸಂತೋಷಿಯಾಗೊ ||ಅ|| ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ ಏಸು ದೇಶ ತಿರುಗಿದರೆ ಬಾಹೋದೇನೊ- ಅಲ್ಲಿ ಆಹೋದೇನೊ ದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವ ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ- ಉಪವಾಸದಲ್ಲಿ ಮೀಸಲಾಗಿ ಮಿಂದು ಜಪತಪ ಹೋಮನೇಮಗಳ ಏಸು ಬಾರಿ ಮಾಡಿದರೂ ಫಲವೇನೊ- ಇದು ಚೆಲುವೇನೊ ವಾಸುದೇವನೆಂಬ ಒಳಗಿಹ ಹಂಸನ ಸೇರಿ ಲೇಸನುಂಡು ಮೋಸಗೊಳದೆ ಮುಕ್ತನಾಗೊ- ನೀ ಶಕ್ತನಾಗೊ ||1|| ಅತ್ತಲೋ ಇತ್ತಲೋ- ಎತ್ತಲೋ ಈ ಸಂಸಾರ ಬತ್ತಲೆಗೆ ಬತ್ತಲೆ ನಿತ್ಯವಲ್ಲ- ಪರಿಮಿತಿ ಇಲ್ಲ ಕತ್ತಲೆ ಕಾವಳದೊಳು ಕಾಣಲಾರದೆ ನೀನು ಸತ್ಯವೆಂಬ ದಾರಿಯನು ಸೇರಲಿಲ್ಲ- ಲೇಸು ತೋರಲಿಲ್ಲ ಉತ್ತಮ ‘ಅ ಉ ಮ' ಎಂಬ ಓಂಕಾರ ಬೀಜಾಕ್ಷರ ಚಿತ್ತದಲಿ ಗ್ರಹಿಸು ನೀ ಬಿಡಬೇಡ- ಬಿಟ್ಟು ಕೆಡಬೇಡ ಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯ ನಿತ್ಯವೆಂದು ಸ್ಥಿರವೆಂದು ನಂಬಬೇಡ- ನಿನಗೆ ಡಂಬ ಬೇಡ ||2|| ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆ ತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊ ಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀ ರಘು ರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು- ಭವದಿ ಮಮತೆ ಇಟ್ಟು ನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದು ಬಾಯಿ ಬಾಯಿ ಬಿಡುತಲಿ ಸಾವುದೇನೊ- ನೀ ನೋವುದೇನೊ ತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯ ದಾಯಕನ ಹೊಂದಿ ನೀ ಧನ್ಯನಾಗೊ- ಮುಕ್ತ ಮಾನ್ಯನಾಗೊ ||3|| ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನು ಒಂದು ಬಾರಿ ಅರುಹಿಂದ ನೆನೆಯಲಿಲ್ಲ- ಮನ ತಣಿಯಲಿಲ್ಲ ಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿ ನೊಂದು ಬೆಂದು ಒಂದರಿಂದ ಉಳಿಯಲಿಲ್ಲ- ಬಂಧ ಕಳೆಯಲಿಲ್ಲ ಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದು ಇಂದು ಕಾಣು ದೇಹದಲಿ ಪಿಂಡಾಂಡ- ಹಾಗೆ ಬ್ರಹ್ಮಾಂಡ ಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮು ಕುಂದನಿಂದ ಮುಕುತಿಯ ಬೇಡು ಕಂಡ್ಯ- ನೀ ನೋಡು ಕಂಡ್ಯ ||4|| ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ ಪರ ನಾರಿಯರ ನೋಟಕೆ ಗುರಿಯ ಮಾಡಿದೆ- ಮನ ಸೆರೆಯ ಮಾಡಿದೆ ಸೋರೆಯೊಳು ಸುರೆ ತುಂಬಿ ಮೇಲೆ ಹುವ್ವಿನ ಹಾರ ಹಾಕಿ ಗೀರುಗಂಧ ಅಕ್ಷತೆಯ ಧರಿಸಿದಂತೆ- ನೀ ಮೆರೆಸಿದಂತೆ ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು ಸಾರಿ ಸೇರಿ ಮುಕ್ತಿಯನ್ನು ಶಮನದಿಂದ- ಮತ್ತೆ ಸುಮನದಿಂದ ನಾರಾಯಣ ಅಚ್ಯುತಾನಂತಾದಿಕೇಶವನ ಸಾರಾಮೃತವನುಂಡು ಸುಖಿಸೊ ಲಂಡ ಜೀವವೆ- ಎಲೊ ಭಂಡ ಜೀವವೆ ||5||

Thoughts & Reflections

0

No reflections shared yet. Be the first to share your thoughts!

Share your thought