Bhasaka
← Back to home

ದೇಶಾಧಿಪತಿ ನರಹರಿಯೆ ನಿನ್ನಯ ಪಾದ

Author: ಕನಕದಾಸCategory: ಶ್ರೀಕೃಷ್ಣRaaga: ಸಾವೇರೀTaala: ಅಟ್ಟ
ದೇಶಾಧಿಪತಿ ನರಹರಿಯೆ ನಿನ್ನಯ ಪಾದ ದಾಸರ ದಾಸನೆಂದೆನಿಸಬೇಕೆನ್ನ ||ಪ|| ರಜ ತಮೋಗುಣ ಪ್ರವರ್ತಕ ಮೂಲಾಂತರದಿಂ ಯಜಮಾನತನದಹಂಕಾರವನು ಒಲ್ಲೆ ಭುಜಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜ ರಜಭಜಕರ ಭಜಕನೆಂದೆನಿಸೆನ್ನ ||1|| ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ ಸ್ತೂರಿ ತಿಲಕವನಿಡುವುದ ನಾನೊಲ್ಲೆ ಸಿರಿ ಊರ್ಧ್ವಪುಂಡ್ರ ದ್ವಾದಶನಾಮವಿಡುವವರ ಪರಿಚಾರಕರ ಪರಿಚಾರಕನೆನಿಸೆನ್ನ ||2|| ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನು ಆದರದ ಅಮೃತಾನ್ನ ಉಣುವುದನೊಲ್ಲೆ ಬೋಧೆಯನು ಹೇಳುವ ಕೇಳುವ ಹರಿದಾಸರ ಪಾದ ತೀರ್ಥಪ್ರಸಾದಭುಂಜಕನೆನಿಸೆನ್ನ ||3|| ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿ ಶೀಲ ರಹಿತ ಬ್ರಾಹ್ಮಣನಾಗಲೊಲ್ಲೆ ಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ ಡಾಲನ ಮನೆ ಬಾಗಿಲ ಕಾಯಿಸೆನ್ನ ||4|| ಕ್ರೂರ ಶಾಸ್ತ್ರವನೋದಿ ಕುರಿ ಕೋಣವನೆ ಕಡಿದು ಘೋರ ನರಕದಿ ಬೀಳುವುದನು ನಾನೊಲ್ಲೆ ವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯ ದ್ವಾರಪಾಲಕನೆಂದೆನಿಸೆನ್ನ ||5|| ಪಟ್ಟೆ ಪಟ್ಟಾವಳಿ ದಿವ್ಯ ದುಕೂಲ ಮಿಂ ಚಿಟ್ಟ ವಸ್ತ್ರ ಉಡುವುದನೊಲ್ಲೆ ನೆಟ್ಟನೆ ಕಾವಿ ಕಾಷಾಯಾಂಬರಗಳನು ಉಟ್ಟವರ ಬಂಟನೆಂದೆನಿಸೆನ್ನ ||6|| ಅರ್ಥ ವಿಷಯಗಳ ಫಲಾಪೇಕ್ಷೆಯಿಂ ಪುಣ್ಯ ತೀರ್ಥಯಾತ್ರೆಯ ಮಾಡಲೊಲ್ಲೆ ದೈತ್ಯ ಮರ್ದನ ಬಾಡದಾದಿಕೇಶವ ನಿನ್ನ ಕೀರ್ತನೆಗೈವರ ಸ್ತುತಿಕನೆನಿಸೆನ್ನ ||7||

Thoughts & Reflections

0

No reflections shared yet. Be the first to share your thoughts!

Share your thought