Bhasaka
← Back to home

ದ್ಯಾವಿ ನಮ್ಮ ದ್ಯಾವರು ಬಂದರು

Author: ಕನಕದಾಸCategory: ಶ್ರೀಕೃಷ್ಣRaaga: ದೇಸ್Taala: ಛಾಪುತಾಳ
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನೀರೆ ||ಪ|| ಕೆಂಗಣ್ಣ ಮೀನನಾಗಿ ನಮರಂಗ ಗುಂಗಾಡು ಸೋಮನ ಕೊಂದಾನ್ಮ್ಯಾ ಗುಂಗಾಡು ಸೋಮನ ಕೊಂದು ವೇದವನು ಬಂಗಾರದೊಡಲಿನಿಗಿತ್ತಾನ್ನ್ಯಾ| |1|| ದೊಡ್ಡ ಮಡುವಿನೊಳಗೆ ನಮ ರಂಗ ಗುಡ್ಡವ ಹೊತ್ಕೊಂಡು ನಿಂತಾನ್ನ್ಯಾ ಗುಡ್ಡವ ಹೊತ್ಕೊಂಡು ನಿಂತು ಸುರರನು ದೊಡ್ಡವರನ್ನ ಮಾಡ್ಯಾನ್ಮ್ಯಾ ||2|| ಚೆನ್ನ ಕಾಡಿನ ಹಂದಿಯಾಗಿ ನಮ ರಂಗ ಚಿನ್ನದ ಕಣ್ಣನ ಕೊಂದಾನ್ಮ್ಯಾ ಚಿನ್ನದ ಕಣ್ಣನ ಕೊಂದು ಭೂಮಿಯ ವನಜ ಸಂಭವಗಿತ್ತಾನ್ಮ್ಯಾ ||3|| ಸಿಟ್ಟಿಂದ ಸಿಂಹನಾಗಿ ನಮ ರಂಗ ಹೊಟ್ಟೆಯ ಕರುಳ ಬಗೆದಾನ್ಮ್ಯಾ ಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ||4|| ಹುಡುಗ ಹಾರುವನಾಗಿ ನಮ ರಂಗ ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ ||5|| ತಾಯ ಮಾತನು ಕೇಳಿ ಸಾಸಿರ ತೋಳಿನ ಆವಿನ ಕಳ್ಳನ ಕೊಂದಾನ್ಮ್ಯಾ ಆವಿನ ಕಳ್ಳನ ಕೊಂದು ಭೂಮಿಯ ಅವನಿಸುರರಿಗೆ ಇತ್ತ್ಯಾನ್ಮ್ಯಾ ||6|| ಪಿಂಗಳ ಕಣ್ಣಿನ ಕೊಂಗಗಳ ಕೂಡಿ ಛಂಗನೆ ಲಂಕೆಗೆ ಪೋದಾನ್ಮ್ಯಾ ಛಂಗನೆ ಲಂಕೆಗೆ ಪೋಗಿ ನಮರಂಗ ಹೆಂಗಸುಗಳ್ಳನ ಕೊಂದಾನ್ಮ್ಯಾ ||7|| ಕರಿಯ ಹೊಳೆಯ ಬಳಿ ತುರುಗಳ ಕಾಯುತ ಉರಗನ ಮಡುವ ಧುಮುಕ್ಯಾನ್ಮ್ಯಾ ಉರಗನ ಹೆಡೆಮೇಲೆ ಹಾರ್ಹಾರಿ ಕುಣಿವಾಗ ವರವ ನಾರೇರ್ಗೆ ಕೊಟ್ಟಾನ್ಮ್ಯಾ ||8|| ಭಂಡನಂದದಿ ಕುಂಡೆಯ ಬಿಟುಗೊಂಡು ಕಂಡಕಂಡಲ್ಲಿಗೆ ತಿರುಗ್ಯಾನ್ಮ್ಯಾ ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ ||9|| ಚೆಲುವ ಹೆಂಡತಿಯ ಕುದುರೆಯ ಮಾಡಿ ಒಳ್ಳೆ ರಾಹುತನಾದಾನ್ಮ್ಯಾ ಒಳ್ಳೆ ರಾಹುತನಾಗಿ ಮ್ಲೇಚ್ಛರ ಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ ||10|| ಡೊಳ್ಳಿನ ಮ್ಯಾಲ್‍ಕೈ ಭರಮಪ್ಪ ಹಾಕ್ಯಾನು ತಾಳವ ಶಿವನಪ್ಪ ತಟ್ಟ್ಯಾನ್ಮ್ಯಾ ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು ಚೆಲುವ ಕನಕಪ್ಪ ಕುಣಿದಾನ್ಮ್ಯಾ ||1||

Thoughts & Reflections

0

No reflections shared yet. Be the first to share your thoughts!

Share your thought