Bhasaka
← Back to home

ಧರೆಯ ಭೋಗವನ್ನು ನಂಬಿ

Author: ಕನಕದಾಸCategory: ಇತರೆRaaga: ನಾದನಾಮಕ್ರಿಯೆTaala: ಏಕತಾಳ
ಧರೆಯ ಭೋಗವನ್ನು ನಂಬಿ ಹರಿಯ ಮರೆದು ಕೆಡಲು ಬೇಡ ಧರೆಯ ಭೋಗ ಕನಸಿನಂತೆ ಕೇಳು ಮಾನವ ||ಪ|| ತಿರುಕನೋರ್ವನೂರ ಮುಂದೆ ಮುರುಕು ಧಮಶಾಲೆಯಲ್ಲಿ ಒರಗಿರುತ್ತಲೊಂದು ಕನಸು ಕಂಡನೆಂತೆನೆ ಪುರದ ಅರಸು ಸತ್ತನವಗೆ ವರ ಕುಮಾರರಿಲ್ಲದಿರಲು ಕರಿಯ ಕೈಲಿ ಕುಸುಮ ಮಾಲೆಯಿತ್ತು ಪುರದೊಳು ||1|| ಬಿಡಲದಾರ ಕೊರಳಿನಲ್ಲಿ ತೊಡರಿಸಲ್ಕೆ ಅವರ ಪಟ್ಟ ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ ಒಡನೆ ತನ್ನ ಕೊರಳಿನಲ್ಲಿ ತೊಡರಿಸುವುದ ಕಂಡು ತಿರುಕ ಪೊಡವಿಯಾಣ್ಮನಾದೆನೆಂದು ಹಿಗ್ಗುತಿದ್ದನು ||2|| ಪಟ್ಟಗಟ್ಟಲಾಗ ನೃಪರು ಕೊಟ್ಟರವಗೆ ಕಪ್ಪಗಳನು ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೆ ಪಟ್ಟದರಸಿಯೊಳಗೆ ಸುಖವ ಪಟ್ಟು ಮನದಿ ಹರುಷಗೊಳಲು ಪುಟ್ಟಿದವು ಹೆಣ್ಣು ಗಂಡು ಮಕ್ಕಳಾಗಲೆ ||3|| ಓಲಗದೊಳಗಿರುತ ತೊಡೆಯ ಮೇಲೆ ಮಕ್ಕಳಾಡುತಿರಲು ಲೀಲೆಯಿಂದ ಚಾತುರಂಗ ಬಲವ ನೋಡುತ ಲೋಲನಾಗಿ ನೆನೆದು ಮನದಿ ಪೇಳೆ ಮಂತ್ರಿಗಳಿಗೆ ಆಗ ಬಾಲೆಯರನು ನೋಡಿ ಮದುವೆ ಮಾಳ್ಪೆನೆಂದನು ||4|| ನೋಡಿ ವರಗಳೆನುತ ಕಳುಹೆ ನೋಡಿ ಬಂದೆವೆನಲು ಜೀಯ ಮಾಡೆ ಮದುವೆ ಮಂಟಪವನು ರಚಿಸಿರೆಂದನು ಗಾಢ ಸಂಭ್ರಮದೊಳು ಕೂಡಿ ಮಾಡಿದನವ ಮದುವೆಗಳನು ರೂಢಿ ಪಾಲರೆಲ್ಲ ಕೇಳಿ ಮೆಚ್ಚುವಂದದಿ ||5|| ಧನದ ಮದವು ರಾಜ್ಯ ಮದವು ವನಿತೆ ಮದವು ಸುತರ ಮದವು ಕನಸಿನಲ್ಲಿ ಕಂಢು ತಿರುಕ ಹಿಗ್ಗುತಿದ್ದನು ಅನಿತರೊಳಗೆ ನೃಪರ ದಂಡು ಮನೆಯ ಮುತ್ತಿದಂತೆ ಕಂಡು ಕನಸಿನಲ್ಲೆ ದಿಗಿಲುಗೊಂಡು ಕಣ್ಣು ತೆರೆದನು ||6|| ಮೆರೆಯುತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆಂದು ತಿರುಕ ತಿರಿವುದಕ್ಕೆ ನಾಚುತಿದ್ದ ಮರುಳನಂದದಿ ಸಿರಿಯು ಕನಸಿನಂತೆ ಕೇಳು ಅರಿತು ಆದಿಕೇಶವನ್ನ ಹರುಷದಿಂದ ಭಜಿಸೆ ನಿತ್ಯ ಸುಖವನೀವನು ||7||

Thoughts & Reflections

0

No reflections shared yet. Be the first to share your thoughts!

Share your thought