Bhasaka
← Back to home

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ

Author: ಕನಕದಾಸCategory: ಶ್ರೀಕೃಷ್ಣRaaga: ಶ್ರೀTaala: ಆಟತಾಳ
ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ ದು ಷ್ಕರ್ಮೇಂದ್ರಿಯಕ್ಕೆ ಕಾಲ್ಗೆರಗುತ್ತಲಿಹೆ ಮರುಳೆ ||ಪ|| ಪುಸ್ತಕವ ಬಿಚ್ಚಿ ಪೌರಾಣ ಶಾಸ್ತ್ರಗಳಿಂ ವಿಸ್ತರಿಸಿ ಹರಿಯ ಕಲ್ಯಾಣಗುಣ ಕಥೆಯನು ಸ್ವಸ್ಥದಿಂ ಕುಳ್ಳಿರ್ದು ಕೇಳೆಂಬ ಠಾವಿನಲಿ ಮಸ್ತಕಕೆ ವ್ಯಥೆಯೆಂದು ಮನೆಯತ್ತ ನೀ ನಡೆವೆ ಹಸ್ತದಿಂ ಹಣ ಭತ್ತ ಹಚ್ಚಡಂಗಳ ಕೊಟ್ಟು ಕುಸ್ತರಿಸಿ ಬಿನುಗು ಚಾರಿರ್ತ್ಯವಂ ಲಾಲಿಸುತ ದುಸ್ತರದ ಲೆತ್ತ ಚದುರಂಗ ಪಗಡೆಯನು ಉದ ಯಾಸ್ತದವರೆಗಾಡುತ ಮೇಲೇಳದಿಹೆ ಮರುಳೆ ||1|| ಸುರಭಿ ಸೇವಂತಿ ಮಲ್ಲಿಗೆ ಮೊಲ್ಲೆ ಬಕುಳ ಪಾ ದರಿ ಚಂಪಕಾ ಕಂಜ ಕಣಿಗಲು ಶ್ರೀ ತುಳಸಿ ಪರಿಮಳದ ಪಚ್ಚೆತೆನೆ ಹರಿಪಾದಕರ್ಪಿಸುತೆ ನಿರುಮಾಲ್ಯ ಪರಿಮಳವನಾಘ್ರಾಣಿಸೆನೆ ಒಲ್ಲೆ ಬಿರಿದ ಕೆಂಜಾಜಿ ಪುಷ್ಪಂಗಳಂ ವನಿತೆಯರ ಸಿರಿ ಮುಡಿಗೆ ಮುಡಿಸಿ ಕುಂತಳ ಸೌರಭವ ಕಂಡು ಹರುಷದಿಂ ರೋಮ ಪುಳಕಿತನಾಗುತಡಿಗಡಿಗೆ ಪರಮ ಸಂತೋಷಮಂ ನೀ ಪಡೆಯುತಿಹೆ ಮರುಳೆ ||2|| ಶತಲಕ್ಷ ಕೋಟಿ ಪ್ರಣತೆಗಳಲ್ಲಿ ಬೆಳಗಿ ಗೋ ಘೃತ ತೈಲ ದೀಪವಚ್ಯುತ ನಿಲಯದಲಿ ಭಾಗ ವತನೃತ್ಯವಂ ನೋಡುತತಿಶಯದ ಹರಿದಿನ ವ್ರತದಲ್ಲಿ ಜಾಗರವ ಮಾಡದಲೆ ನಿದ್ರೆಗೈವೆ ಕೃತಕ ಪಣ್ಯಾಂಗನೆಯ ಚತುರ ನೃತ್ಯಕೆ ಮನೋ ರಥ ಸಿದ್ಧಗೊಳಿಸಿ ಈಕ್ಷಿಪೆನೆಂದು ಕುಜನ ಸಂ ಮತವೆರಸಿ ಬೆಳತನಕ ಕುಳ್ಳಿರುತ ನಿದ್ರಾ ವ ರ್ಜಿತನಾಗಿ ಪರಮ ಸಂತಸ ಪಡೆಯುತಿಹೆ ಮರುಳೆ ||3|| ಗಂಧ ಶಾಲ್ಯಾನ್ನ ನವಘೃತ ತೋಯ ಪಳಿದ್ಯ ನಲ ವಿಂದ ಪರಮಾನ್ನ ಮಹಶಾಕ ಸೀಕರಣೆಯನು ಒಂದೆರಡು ಪರುಠವಿಸಿ ದ್ವಾದಶಿ ದಿನದಂದು ಮು ಕುಂದಾರ್ಪಣವ ಮಾಡಿ ಮನೆಯೊಳಗೆ ಉಣ್ಣದಿಹೆ ಬಂದಾವನಾದೊಡಂ ಕರೆಯೆ ದೇಹದ ಪುಣ್ಯ ವೆಂದವರ ಮನೆಗಳಿಗೆ ಹೋಗಿ ನೀ ಕುಳ್ಳಿರ್ದು ಚೆಂದದಿಂ ಬಣ್ಣಿಸುತ ಮಿಂಚುಕೂಳುಗಳನ್ನು ತಿಂದೊಡಲ ಪೊರೆದು ಕಾಲವ ಕಳೆಯುತಿಹೆ ಮರುಳೆ ||4|| ತಿದ್ದುವ ವಿಮಲ ವೈಷ್ಣವರು ಬರುವುದನು ಕಂ ಡೆದ್ದು ಪದಗಳಿಗೆ ನಮಸ್ಕಾರವನು ಮಾಡದಲೆ ಉದ್ದು ಕನ್ನಡಿ ಮೇಲೆ ಉರುಳುವಂತಲ್ಲಿಂದ ಎದ್ದು ದುಷ್ಟರ ಪದಕೆ ಬಿದ್ದು ನೀ ನರಳುತಿಹೆ ಮದ್ದ ನಾ ಪೇಳುವೆನು ಬುದ್ಧಿಯಿಂ ತಿಳಿ ವಿಶ್ವ ದುದ್ಧಾರಕನು ಕಾಗಿನೆಲೆಯಾದಿ ಕೇಶವನ ಮುದ್ದು ನಾಮಸ್ಮರಣೆಯ ಮಾಡುತಲಿ ಜವನವರ ಗೆದ್ದು ಸಿರಿ ವೈಕುಂಠ ಪದವಿಯನು ಪಡೆ ಮರುಳೆ ||5||

Thoughts & Reflections

0

No reflections shared yet. Be the first to share your thoughts!

Share your thought