Bhasaka
← Back to home

ನಡತೆಹೀನನಾದರೇನಯ್ಯ

Author: ಕನಕದಾಸCategory: ಶ್ರೀಕೃಷ್ಣRaaga: ಕಾಫಿTaala: ಆಟತಾಳ
ನಡತೆಹೀನನಾದರೇನಯ್ಯ - ಜಗ ದೊಡೆಯನ ಭಕುತಿ ಇದ್ದರೆ ಸಾಲದೆ ||ಪ|| ಪುಂಡರಾ ಪಾಂಡುನಂದನರು ಮತ್ತದರೊಳು ಕಂಡೋರ್ವಳನೈವರು ಭೋಗಿಪರು ಖಂಡಿಸಿದರು ರಣದೊಳು ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||1|| ಒಂದೊಂದು ಪರಿ ಬುದ್ಧಿಯ ಹೇಳಿ ಹಿರಣ್ಯಕ ಕಂದನ ನಿರ್ಬಂಧಿಸುತಿರಲು ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯ ಕೊಲಿಸಿದನೆಂಬರು ಜನರು ||2|| ದಾಸಿಯ ಜಠರದೊಳು ಜನಿಸಿದ ವಿದುರ - ಸ ನ್ಯಾಸಿಯೆಂದೆನಿಸಿಕೊಂಡ ಸಾಸಿರನಾಮದೊಡೆಯ ಕೃಷ್ಣ ಬಾಡದಾದಿ ಕೇಶವನ ಭಕುತಿಯೊಂದಿದ್ದರೆ ಸಾಲದೆ ||3||

Thoughts & Reflections

0

No reflections shared yet. Be the first to share your thoughts!

Share your thought