Bhasaka
← Back to home

ನನ್ನಿಂದ ನಾನೇ ಜನಿಸಿ ಬಂದೆನೆ

Author: ಕನಕದಾಸCategory: ವೈರಾಗ್ಯRaaga: ಮುಖಾರಿTaala: ಆಟತಾಳ
ನನ್ನಿಂದ ನಾನೇ ಜನಿಸಿ ಬಂದೆನೆ ದೇವ ಎನ್ನ ಸ್ವತಂತ್ರವು ಲೇಶವಿದ್ದರು ತೋರು ||ಪ|| ನಿನ್ನ ಪ್ರೇರಣೆಯಿಂದ ನಡೆದು ನುಡಿದ ಮೇಲೆ ನಿನ್ನದು ತಪ್ಪೋ ನನ್ನದು ತಪ್ಪೋ ಪರಮಾತ್ಮ ||ಅ|| ಜನನಿಯ ಜಠರದಲಿ ನವಮಾಸ ಪರಿಯಂತ ಘನದಿ ನೀ ಪೋಷಿಸುತಿರೆ, ನಾನು ಜನಿಸಲಾರೆನು ಎನೆ ಜನಿಸೆಂದಿಕ್ಕಳದಿಂದ ವನಜಾಕ್ಷ ನೂಕಿದವನು ನೀನಲ್ಲವೆ ||1|| ಎಲುವುಗಳ ಜಂತೆ ಮಾಡಿ ನರಗಳ ಹುರಿಯಿಂ ಹೊಲಿದು ಚರ್ಮವ ಹೊದಿಸಿ ದೇಹದೊಳು ಮಲಮೂತ್ರಕೆ ಹೊರದಾರಿ ನಿರ್ಮಿಸಿ ಹೃದಯದಲಿ ನೆಲಸಿ ಚೇತನವನಿತ್ತವ ನೀನಲ್ಲವೆ ||2|| ಜನಿಸಿದಾರಭ್ಯದಿಂದ ಇಂದಿನ ಪರಿಯಂತ ಘನಘನ ಪಾಪ ಸುಕರ್ಮಂಗಳನು ಮನಕೆ ಬೋಧಿಸಿ ಮಾಡಿಸಿ ಮುಂದೆ ಇದನೆಲ್ಲ ಅನುಭವಿಸುವುದು ಜೀವನೊ ನೀನೊ ದೇವ ||3|| ಅಂಧಕನ ಕೈಲಿ ಕೋಲಿತ್ತು ಕರೆದೊಯ್ಯುವಾ ಮುಂದಾಳು ತಪ್ಪಿ ಗುಂಡಿಗೆ ಕೆಡಹಲು ಅಂಧಕನ ತಪ್ಪೋ ಅದು ಮುಂದಾಳಿನ ತಪ್ಪೋ ಹಿಂದಾಡಬೇಡ ಎನ್ನೊಳು ತಪ್ಪಿಲ್ಲವೊ ||4|| ಕಂದನ ತಾಯಿ ಆಡಿಸುವಾಗ ಅದು ಪೋಗಿ ಅಂದಿ ಬಾವಿ ನೋಡುವುದನು ಕಂಡು ಬಂದು ಬೇಗನೆ ಬಾಚಿ ಎತ್ತಿಕೊಳ್ಳದಿದ್ದರದು ಕಂದನ ತಪ್ಪೋ ಮಾತೆಯ ತಪ್ಪೋ ಪರಮಾತ್ಮ ||5|| ಭಾರ ನಿನ್ನದೊ ದೂರು ನಿನ್ನದೊ ಕೃಷ್ಣ ನಾರಿ ಮಕ್ಕಳು ತನುಮನ ನಿನ್ನದಯ್ಯ ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದ ಹೇರನೊಪ್ಪಿಸಿದ ಮೇಲೆ ಸುಂಕವೆ ದೇವ ||6|| ನ್ಯಾಯವಾದರೆ ದುಡುಕು ನಿನ್ನದೊ, ರಂಗ ಮತ್ತ- ನ್ಯಾಯವಾದರೆ ಪೇಳುವರಾರು ಮಾಯಾರಹಿತ ಕಾಗಿನೆಲೆಯಾದಿ ಕೇಶವ ಕಾಯಯ್ಯ ತಪ್ಪನೆಣಿಸದೆ ದೇವ ||7||

Thoughts & Reflections

0

No reflections shared yet. Be the first to share your thoughts!

Share your thought