Bhasaka
← Back to home

ನೀನಾರ ಬಾಂಧವನೊ ನಿಖಿಳ ಯಾದವರೊಳಗೆ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಆಟತಾಳ
ನೀನಾರ ಬಾಂಧವನೊ ನಿಖಿಳ ಯಾದವರೊಳಗೆ ಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ||ಪ|| ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿ ಓವಿ ಮೊಲೆ ಕುಡಿಸಿದಳ ಅಸುವ ಸೆಳೆದು ಮಾವ ಕಂಸನ ಕೊಂದು ಮನುಜ ವೇಷದಲಿ ಗಾಂಡೀ ವಿಯ ಮನೆಯ ಬಂಡಿ ಬೋವನಾದೆ ||1|| ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆ ಪರಮಭಕ್ತನು ಸ್ವಯಿಚ್ಛಾ ಮರಣಿಯು ಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿ ಶರಮಂಚದೊಳುಪಾಯದಲಿ ಮಲಗಿಸಿದೆ ||2|| ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲು ಸೋದರಳಿಯನು ಮೂರು ಲೋಕವರಿಯೆ ಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿ ಸೋದರನ ಷಡುರಥರ ಕೈಲಿ ಕೊಲ್ಲಿಸಿದೆ ||3|| ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿ ನರನ ಕೈಯಿಂದ ಸೈಂಧವನ ಕೊಲ್ಲಿಸಿದೆ ||4|| ಶಪಥದಲಿ ರಣದೊಳರಸನ ಹಿಡಿವೆನೆಂಬವಗೆ ತಪಸಿಗಳ ತಂದು ತತ್ತ್ವ ಬೋಧಿಸಿ ಕಪಟವರಿಯದ ನೃಪನ ಕೈಯೊಳನೃತವ ನುಡಿಸಿ ಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ ||5|| ಯಮಳರನು ಪಡೆದ ತಾಯಿಗೆ ಸಹೋದರನ ಭೂ ರಮಣರೊಳಗಗ್ಗಳೆಯನತಿ ಧೈರ್ಯನು ಸಮರದಲಿ ರವಿಸುತನ ರಥಕೆ ಸುತನ ಮಾಡಿ ಯಮಸುತನ ಕೈಲಿ ಮಾವನ ಕೊಲ್ಲಿಸಿದೆ ||6|| ಜನವರಿಯದಂತೆ ಜೀವನದೊಳಡಗಿರ್ದವಗೆ ಮನಕೆ ಖತಿಗೊಳಿಸಿ ಬರ ಸೆಳೆದು ನಗುತ ಅನುವರದೊಳಾಯತದ ತೊಡೆಯ ಸನ್ನೆಯ ತೋರಿ ಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ ||7|| ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ ದಿರದೊಳೈವರು ನಿದ್ರೆಗೈಯುತಿರಲು ನರವೃಕೋದರ ಧರ್ಮನಂದರನಗಲಸಿಯೆ ಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ ||8|| ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿ ಭಾವ ಮೈದುನರೈವರನು ರಕ್ಷಿಸಿ ಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮ ದೇವ ನೆಲೆಯಾದಿಕೇಶವ ವೆಂಕಟೇಶ ||9||

Thoughts & Reflections

0

No reflections shared yet. Be the first to share your thoughts!

Share your thought