ॐ
ನೊಂದೆ ನಾ ಹರಿಯೆನ್ನದೆ ||ಪ||
ನೊಂದೆ ನಾ ಸತ್ತು ಹುಟ್ಟುವ ಕೋಟಲೆಗಳಿಂದ
ನೊಂದೆ ನಾ ಪಂಚೇಂದ್ರಿಯಗಳ ಬಾಧೆಗಳಿಂದ
ನೊಂದೆ ನಾ ವೈರಿ ಷಡ್ವರ್ಗದಾಟಗಳಿಂದ
ನೊಂದೆ ನಾ ಹರಿಯೆನ್ನದೆ ||ಅ||
ಒಂದು ಕ್ಷಣ ದುರ್ಗಂಧ ವಾಯು ಬರೆ ಹೇಸುವರು
ತಂದೆಯುದರದಿ ಮೂರು ಮಾಸ ತಾಯುದರದಲಿ
ಸಂದೇಹವಿಲ್ಲ ನವಮಾಸ ಮಲ ಮೂತ್ರದೊಳು
ಒಂದಾಗಿ ನಿಂದು ಕುದಿಕುದಿದು ಹುಟ್ಟಿ
ಬಂದೆ ಎಂಬತ್ತು ನಾಲುಕು ಲಕ್ಷ ಯೋನಿಯೊಳು
ನೊಂದೆ ಮುನ್ನೂರ ಅರವತ್ತು ಬೇನೆಗಳಿಂದ
ಒಂದು ಕ್ಷಣವೂ ಯಮನ ಬಾಧೆ ತಾಳಲಾರೆನು
ಹಿಂದೆಗೆಯದಿರು ಇಂಬಿತ್ತು ಕಾಯೊ ಮುರಾರಿ ||1||
ಎಲವುಗಳ ಗಳ ಮಾಡಿ ಬಲು ನರಂಗಳ ಬಿಗಿದು
ಚೆಲುವ ತೊಗಲಂ ಪೊದಿಸಿ ಮಜ್ಜೆ ಮಾಂಸವ ತುಂಬಿ
ಹೊಲೆ ಗೂಡಿನೊಳು ಪುಗಿಸಿ ತಲೆ ಹುಳಕ ನಾಯಂತೆ
ಅಲೆದು ಮನೆಮನೆಯೆದುರು ಉಚ್ಚಿಷ್ಟವನು ತಿಂದು
ಕಳವು ಹಾದರ ಪಂಚಪಾತಕಂಗಳ ಮಾಡಿ
ನೆಲೆಯಿಲ್ಲದಧಿಕತರ ನರಕದೊಳಗಾಳ್ದೆನೈ
ಒಲಿದು ಬಂದು ರಕ್ಷಿಸು ನಾಗವೈರಿ ವಾಹನನೆ
ನಳಿನ ಲೋಚನನೆ ನೀ ಎನ್ನ ಕೈ ಬಿಡದೆ ||2||
ಹುಟ್ಟುವಾಗಲೆ ಜಾತಕರ್ಮ ಷೋಡಶವೆಂಬ
ಕಟ್ಟಳೆಯ ದಿವಸದಲಿ ನಂಟರಿಷ್ಟರು ಕೂಡಿ
ಕಟ್ಟಿ ಮುಂಜಿಯ, ಹರುಷದಲಿ ಮದುವೆ ಮಾಡಿ ಉಂ
ಡುಟ್ಟು ಹಾಡಿ ಹರಸಿದರು ನೂರ್ಕಾಲ ಬದುಕೆಂದು
ಬಿಟ್ಟು ಪ್ರಾಣಂಪೋಗೆ ಪೆಣನೆಂದು ಮೂಲೆಯೊಳು
ಕಟ್ಟಿ ಕುಳ್ಳಿರಿಸಿ ಹೊಟ್ಟೆಯ ಹೊಯ್ದುಕೊಂಡಳುತ
ಸುಟ್ಟು ಸುಡುಗಾಡಿನಲಿ ಪಿಂಡಗಳನಿಕ್ಕಿ ಬಲು
ಕಟ್ಟಳೆಯ ಕಾಣಿಸಿದರಯ್ಯ ಹರಿಯೆ ||3||
ಹಲವು ಜನುಮದಿ ತಾಯಿ ಎನಗಿತ್ತ ಮೊಲೆಹಾಲು
ನಲಿನಲಿದು ಉಂಬಾಗ ನೆಲಕೆ ಬಿದ್ದುದ ಕೂಡಿ
ಅಳೆದು ನೋಡಿದರೆ ಕ್ಷೀರಾಂಬುಧಿಗೆ ಎರಡು ಮಡಿ
ಹಲವಾರು ಸಲ ಅತ್ತ ಅಶ್ರುಜಲವನು ಕೂಡಿ
ಅಳೆದು ನೋಡಿದರೆ ಲವಣಾರ್ಣವಕೆ ಮೂರು ಮಡಿ
ಎಲವುಗಳ ಕೂಡಿದರೆ ಮೇರುವಿಗೆ ನಾಲ್ಕು ಮಡಿ
ಸುಲಿದು ಚರ್ಮವ ಹಾಸಿದರೆ ಧರೆಗೆ ಐದು ಮಡಿ
ನೆಲೆ ಯಾವುದೀ ದೇಹಕೆ ನರಹರಿಯೆ ||4||
ತಂದೆತಾಯಿಗಳಾರು ಇದ್ದ ಊರಾವುದು
ಹೊಂದಿದ್ದ ಮನೆಯೆಲ್ಲಿ ಇದ್ದ ಸತಿ ಸುತರಾರು
ಹಿಂದಿದ್ದ ಕುಲಗೋತ್ರ ನಾಮಂಗಳೆನಗೆಷ್ಟು
ಬಂದಂಥ ಸುಖದುಃಖವೆಷ್ಟು
ಅಂದು ಕೊಂದವರಾರು ಇಂದು ಕಾಯ್ವರದಾರು
ದಂದುಗವನಿದನೆಲ್ಲ ನೀಬಲ್ಲೆ ನಾನರಿಯೆ
ತಂದೆ ನೆಲೆಯಾದಿಕೇಶವನೆ ನಿನ್ನಯ ಪಾದ
ದ್ವಂದ್ವವನು ಎಂದಿಗೂ ಬಿಡೆನು ಬಿಡೆನೊ ||5||
Thoughts & Reflections
0No reflections shared yet. Be the first to share your thoughts!