Bhasaka
← Back to home

ಪರಮ ಪುರುಷ ಹರಿ ಗೋವಿಂದ

Author: ಕನಕದಾಸCategory: ಶ್ರೀಕೃಷ್ಣRaaga: ಶ್ರೀTaala: ಆದಿತಾಳ
ಪರಮ ಪುರುಷ ಹರಿ ಗೋವಿಂದ- ಸಿರಿ ವರ ನಾರಾಯಣ ಗೋವಿಂದ ||ಪ|| ನಿಶೆವೆಸರಸುರನ ಉಸಿರ ತೊಲಗಿಸಿದೆ ಕುಸುಮ ಶರನ ಪಿತ ಗೋವಿಂದ ವಸುಪೂರಿತ ಶ್ರುತಿ ಮಸುಳಿಸದೆ ತಂದೆ ಬಿಸಜಸಂಭವನಯ್ಯ ಗೋವಿಂದ ||1|| ಜತನದಿ ಮಧುಮಥನದಿ ಮಂದರ ಪರು ವತ ಉದ್ಧರಿಸಿದೆ ಗೋವಿಂದ ಶತಕ್ರತುವಿನ ಸಿರಿ ಗತವಾಗದ ಮುನ್ನ ಕ್ಷಿತಿ ಪೆತ್ತನಯ್ಯ ಗೋವಿಂದ ||2|| ಭೂತಳವೆರಸಿ ರಸಾತಳಕಿಳಿದಿಹ ಪಾತಕನ ಕಂಡೆ ಗೋವಿಂದ ಆತನೊಡನೆ ಕಾದಾತನ ಗೆಲಿದು ಮ ಹೀಳತಳವನು ತಂದೆ ಗೋವಿಂದ ||3|| ದುರುಳಾಸುರನ ನಿಡುಗರುಳ ಮಾಲೆ ಮುಂ ಗೊರಳೊಳು ಧರಿಸಿದೆ ಗೋವಿಂದ ಗರಳಕೊರಳನು ಬೆರಳೆತ್ತಿ ಪೊಗಳಲು ತರಳಗೊಲಿದೆ ನೀ ಗೋವಿಂದ ||4|| ವಾಮನನಾಗಿ ನಿಸ್ಸೀಮ ಬಲಿಯ ಕೈಯ ಭೂಮಿಯನಳೆಕೊಂಡೆ ಗೋವಿಂದ ತಾಮರಸ ಪದದಿ ಕನಕ ಗರ್ಭಯೋಗ ವ್ಯೋಮಗಂಗೆಯ ತಂದೆ ಗೋವಿಂದ ||5|| ಸುರಪಶುವಿಗೆ ಋಷಿಯನು ಕೊಂದನ ಬಹು ಕರ ಬಲ ಮುರಿದೆಯೊ ಗೋವಿಂದ ತರಹರಿಸದೆ ವಸುಧೆಯ ಒಡೆತನ ಭೂ ಸುರರಿಗೆ ನೀಡಿದೆ ಗೋವಿಂದ ||6|| ತ್ರಿಣಯನ ತಾತ್ಪರ್ಯ ರಾವಣನ ಶಿರ ರಣದೊಳುರುಳಿಸಿದೆ ಗೋವಿಂದ ಕ್ಷಣಮೆಣಿಸದೆ ಸದ್ಗುಣವಂತ ವಿಭೀ ಷಣಗಭಯವಿತ್ತೆ ಗೋವಿಂದ ||7|| ಮಾರಣ ಕ್ರತು ಸಂಪೂರಣ ಕಂಸ ಸಂ ಹಾರಣ ಭುಜಬಲ ಗೋವಿಂದ ವಾರಣಪುರಪತಿ ಸಿರಿ ಭೂಭಾರೋ ತ್ತಾರಣ ಬಲಯುತ ಗೋವಿಂದ ||8|| ಕಥೆಯನು ನಿರ್ಮಿಸಿ ಪತಿವ್ರತೆಯರ ಘನ ವ್ರತಗಳ ಕೆಡಿಸಿದೆ ಗೋವಿಂದ ಜತೆಯಗಲದ ಪುರತ್ರಿತಯ ಗೆಲಿದು ದೇ ವತೆಗಳ ಸಲಹಿದೆ ಗೋವಿಂದ ||9|| ಜಾಜಿಯ ಮರಕತ ತೇಜಿಯನೇರಿ ವಿ ರಾಜಿಪ ರಾವುತ ಗೋವಿಂದ ಸೂಜಿಯ ಬೆನ್ನೊಳು ರಾಜಿಪ ತೆರದಿ ಸ ಹಜರೊಳಡಗಿರ್ಪೆ ಗೋವಿಂದ ||10|| ಮೇದಿನಿಗೋಸುಗ ಕಾದಿ ಕಲಹದಿ ವಿ ರೋಧಿಗಳ ಕೊಂದೆ ಗೋವಿಂದ ಸಾಧುಗಳಿಗೆ ಸುಖವೀಯುವ ಬಾಡದ ಶ್ರೀಧವ ಕೇಶವ ಗೋವಿಂದ ||11||

Thoughts & Reflections

0

No reflections shared yet. Be the first to share your thoughts!

Share your thought