Bhasaka
← Back to home

ಬಂಟನಾಗಿ ಬಾಗಿಲ ಕಾಯ್ವೆ ಹರಿಯ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಆಟತಾಳ
ಬಂಟನಾಗಿ ಬಾಗಿಲ ಕಾಯ್ವೆ ಹರಿಯ ||ಪ|| ವೈಕುಂಠದ ಸೊಂಪಿನ ದಾಸರ ಮನೆಯ ||ಅ|| ಹೊರಸುತ್ತು ಪ್ರಾಕಾರ ನಾ ಸುತ್ತಿ ಬರುವೆ ಬರುವ ಹೋಗುವರ ವಿಚಾರಿಸುತಿರುವೆ ಕರದಿ ಕಂಬಿಯ ಪೊತ್ತು ಅಲ್ಲಿ ನಿಂದಿರುವೆ ಶ್ರೀ ಹರಿಯ ಸಮ್ಮುಖದ ಓಲಗದೊಳಿರುವೆ ||1|| ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ ಚಿತ್ರದ ಚಾವಡಿ ರಜವನು ಬಳಿವೆ ಮುತ್ತಿನ ರಂಗವಲ್ಲಿಯನಿಟ್ಟು ಬರೆವೆ ರತ್ನಗಂಬಳಿ ಹೊತ್ತು ಹಾಸುವೆನು ||2|| ವೇಳೆವೇಳೆಗೆ ನಾನೂಳಿಗವ ಮಾಡುವೆ ಆಲವಟ್ಟಿಗೆ ಚಾಮರವ ಬೀಸುವೆ ತಾಳದಂಡಿಗೆ ಭೃಂಗಿ ಮೇಳಗಳ ಕೂಡಿ ಶ್ರೀ ಲೋಲನ ಕೊಂಡಾಡಿ ಪಾಡುವೆನು ||3|| ಎಂಜಲ ಹರಿವಾಣಂಗಳ ಬೆಳಗುವೆ ಕಂಜನಾಭನ ಪಾದಕಮಲವ ತೊಳೆವೆ ರಂಜಿಪ ಕುಸುಮದ ಮಾಲೆ ತಂದಿಡುವೆ ಸಂಜೆಗೆ ಪಂಜಿನ ದಾಸನಾಗಿರುವೆ ||4|| ಮೀಸಲೂಳಿಗವ ನಾ ಮಾಡಿಕೊಂಡಿರುವೆ ಶೇಷ ಪ್ರಸಾದವ ಉಂಡುಕೊಂಡಿರುವೆ ಶೇಷಗಿರಿ ಕಾಗಿನೆಲೆಯಾದಿಕೇಶವನ ದಾಸರ ದಾಸರ ದಾಸರ ಮನೆಯ ||5||

Thoughts & Reflections

0

No reflections shared yet. Be the first to share your thoughts!

Share your thought