Bhasaka
← Back to home

ಬಂದಿದೆ ದೂರು ಬರಿದೆ ಪಾಂಡವರಿಗೆ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಆಟತಾಳ
ಬಂದಿದೆ ದೂರು ಬರಿದೆ ಪಾಂಡವರಿಗೆ ||ಪ|| ಕೊಂದವರಿವರು ಕೌರವರನೆಂಬಪಕೀರ್ತಿ ||ಅ|| ಮುನ್ನಿನ ವೈರದಿ ಕಡು ಸ್ನೇಹವ ಮಾಡಿ ಉನ್ನತ ಲೆತ್ತ ಪಗಡೆಯಾಡಿಸಿ ತನ್ನ ಕುಹಕದಿಂದ ಕುರುಬಲವ ಕೊಂದವನು ಘನ್ನಘಾತಕ ಶಕುನಿಯೊ ಪಾಂಡವರೊ ||1|| ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನು ಧುರದೊಳು ಷಂಡನ ನೆಪದಿಂದಲಿ ಸರಳ ಮಂಚದ ಮೇಲೆ ಮಲಗಿ ಮೊಮ್ಮಗನ ಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ ||2|| ಮಗನ ನೆಪದಿ ಕಾಳಗವ ಬಿಸುಟು ಸುರ ನಗರಿಗೈದಲು ವೈರಾಗ್ಯದಲಿ ಜಗವರಿಯಲು ಕುರುವಂಶಕ್ಕೆ ಕೇಡನು ಬಗೆದು ಕೊಂದವನು ದ್ರೋಣನೊ ಪಾಂಡವರೊ ||3|| ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ ಕೊಟ್ಟ ಭಾಷೆಗೆ ಐವರ ಕೊಲ್ಲದೆ ನೆಟ್ಟನೆ ರಣಮುಖದಲಿ ತನ್ನ ಪ್ರಾಣವ ಬಿಟ್ಟು ಕೊಂದವನು ಕರ್ಣನೊ ಪಾಂಡವರೊ ||4|| ಮಥನಿಸಿ ಸೂತತನವ ಮಾಡಿ ರಣದೊಳು ಅತಿಹೀನಗಳೆಯುತ ರವಿಸುತನ ರಥದಿಂದಿಳಿದು ಪೋಗಿ ಕೌರವಬಲವನು ಹತ ಮಾಡಿದವನು ಶಲ್ಯನೊ ಪಾಂಡವರೊ ||5|| ಜಲದೊಳು ಮುಳುಗಿ ತಪವ ಮಾಡಿ ಬಲವನು ಛಲದಿಂದೆಬ್ಬಿಸಿ ಕಾದುವೆನೆನುತ ಕಲಿ ಭೀಮಸೇನನ ನುಡಿಗೇಳಿ ಹೊರವಂಟು ಕುಲವ ಕೊಂದವನು ಕೌರವನೊ ಪಾಂಡವರೊ ||6|| ಕವುರವ ಪಾಂಡವರಿಗೆ ಭೇದ ಪುಟ್ಟಿಸಿ ಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿ ಸವುಶಯವಿಲ್ಲದೆ ಕುರುಬಲವ ಕೊಂದವನು ಹಿವುಸಕನಾದಿಕೇಶವನೊ ಪಾಂಡವರೊ ||7||

Thoughts & Reflections

0

No reflections shared yet. Be the first to share your thoughts!

Share your thought