Bhasaka
← Back to home

ಮಂದರಧರ ಪಾವನ ಇಂದಿರಾರಮಣನ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಆಟತಾಳ
ಮಂದರಧರ ಪಾವನ ಇಂದಿರಾರಮಣನ- ಗೋವಿಂದ ಎನ್ನಿರೋ ||ಪ|| ನಂದನ ಕಂದ ಮುಕುಂದಾಬ್ಧಿಶಯನನ- ಗೋವಿಂದ ಎನ್ನಿರೋ ||ಅ|| ಗರಳಕಂಧರ ಸಖನನುಜನ ಕೊಂದನ- ಗೋವಿಂದ ಎನ್ನಿರೋ ಸುರಮುನಿಯನುಜನ ಪಾದವ ಪಿಡಿದನ- ಗೋವಿಂದ ಎನ್ನಿರೋ ಪರಮ ವೈಷ್ಣವರ ಕೈಲಿ ದಾನವ ಪಿಡಿದನ- ಗೋವಿಂದ ಎನ್ನಿರೋ ಉರಗನ ಮಗಳ ಗಂಡಗೆ ಪ್ರಾಣವಿತ್ತನ- ಗೋವಿಂದ ಎನ್ನಿರೋ ||1|| ಸತಿ ರುಕ್ಮಿಣಿ ರಾಧೆಯ ಚುಂಬಿಸಿದಾತನ- ಗೋವಿಂದ ಎನ್ನಿರೋ ಅತಿಶಯದಿಂದ ಸತಿ ರೂಪ ತಾಳ್ದನ- ಗೋವಿಂದ ಎನ್ನಿರೋ ಪಿತನ ಮಾತನು ಶಿರದೊಳಗಾಂತು ನಡೆದನ- ಗೋವಿಂದ ಎನ್ನಿರೋ ಮತಿವಂತನಾಗಿ ಮಾತೆಯ ಶಿರವ ತರಿದನ- ಗೋವಿಂದ ಎನ್ನಿರೋ ||2|| ಕರೆತರಿಸಿದ ಮಾವನ ಕೊಂದಾತನ- ಗೋವಿಂದ ಎನ್ನಿರೋ ಧರೆಯ ಒಯ್ದನ ಕಾಯಗಳೆದನ- ಗೋವಿಂದ ಎನ್ನಿರೋ ಈರೇಳು ಭುವನಗಳ ಉದರದೊಳಿಟ್ಟನ- ಗೋವಿಂದ ಎನ್ನಿರೋ ಮಾರಜನಕ ಕಾಗಿನೆಲೆಯಾದಿಕೇಶವನ- ಗೋವಿಂದ ಎನ್ನಿರೋ ||3||

Thoughts & Reflections

0

No reflections shared yet. Be the first to share your thoughts!

Share your thought