Bhasaka
← Back to home

ಮಗನಿಂದೆ ಗತಿಯುಂಟೆ ಜಗದೊಳಗೆ

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಮುಟ್ಟೆತಾಳ
ಮಗನಿಂದೆ ಗತಿಯುಂಟೆ ಜಗದೊಳಗೆ ನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ? ||ಪ|| ತ್ರಿಗುಣರಹಿತ ಪರಮಾತ್ಮನ ಧ್ಯಾನದಿ ಹಗಲಿರುಳು ನಿತ್ಯಾನಂದದಿಂದ ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ ಮಗನಿದ್ದರೇನು ಇಲ್ಲದಿದ್ದರೇನು? ||1|| ಲಲನೆಯರು ಪುರುಷರು ತಮತಮ್ಮ ಕಾಮದ ಸಲುವಾಗಿ ಕೂಡೆ ಶೋಣಿತ ಶುಕ್ಲದಿ ಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದ ನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ? ||2|| ಪರಮ ದುಷ್ಟನಾಗಿ ಮರೆತು ಸ್ವಧರ್ಮವ ಗುರು ಹಿರಿಯರ ಸಾಧುಗಳ ನಿಂದಿಸಿ ಬೆರೆದನ್ಯ ಜಾತಿಯ ಪರನಾರಿಯ ಕೂಡಿ ಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ ||3|| ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು- ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ ಹೆತ್ತರೇನು ಇನ್ನು ಹೆರದಿದ್ದರೇನಯ್ಯ? ||4|| ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬ ಕೃತಕ ಶಾಸ್ತ್ರವು ಲೌಕಿಕಭಾವಕೆ ಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ? ||5||

Thoughts & Reflections

0

No reflections shared yet. Be the first to share your thoughts!

Share your thought