Bhasaka
← Back to home

ಜೇನಿನ ಗೂಡೊಳು

Author: ಸ್ವಾಮಿ ಹರ್ಷಾನಂದCategory: ಶ್ರೀದೇವಿRaaga: ದೇಸ್Taala: ತ್ರಿತಾಲ
ಜೇನಿನ ಗೂಡೊಳು ಹುದುಗಿಹ ಮಧುವೋಲ್ ದೇವನ ಹೃದಯದಿ ಹುದುಗಿಹ ಕರುಣೆಯು | ದೀನರ ಆರ್ತರ ಕೂಗಿನ ಹೊಡೆತಕೆ ಶಾರದೆ-ರೂಪದಿ ಸೂಸಿತು ಹರಿಯಿತು || ಮಾನಸ-ಸರಸಿಜ-ಮಂದಾಕಿನಿ-ಜಲ ಭಾರತ-ಭೂಮಿಯ ಪಾವನಗೈದರೆ | ಶಾರದರೂಪೀ ಕರುಣಾಗಂಗೆಯು ವಿಶ್ವಕೆ ತಂಪಿನ ಸುಧೆಯನು ನೀಡಿತು || ತನ್ನನ್ನುಕಡಿವಗು ತಣ್ಣನೆ ನೆರಳನು ನೀಡುವ ವೃಕ್ಷದ ತೆರದಲಿ ಶಾರದೆ | ತನ್ನನು ಹಿಂಸಿಸಿ ಬಾಳಲು ಬಯಸಿದ ಮೂರ್ಖರ ಮನ್ನಿಸಿ ಹರಸಿದಳಲ್ಲವೆ || ಸರ್ವವಿದ್ಯೆಗಳ ಮೂರುತಿ ನೀನು ಭೋಗದ ಮೋಕ್ಷದ ದಾತೆಯು ನೀನೇ | ಎನ್ನಯ ಹೃದಯದಿ ನಿನ್ನಯ ಭಕ್ತಿಯ ತುಂಬಿಸು ಕೂಡಲೆ ಕೃಪೆಯನು ತೋರುತ || ನಾನೂ ನಿನ್ನಯ ಪುತ್ರನು ತಾಯೇ “ದುರುಳನು ಈತನು, ಪುತ್ರನೆ!'ʼ ಎನದಿರು | ದುರುಳ ಕುವರರಿದ್ದರು ಈ ಲೋಕದಿ ದುರುಳ ಮಾತೆಯನು ಎಂದಿಗು ಕಾಣೆವು || ಹಗಲೂ ಇರುಳೂ ಪರರನು ಹಳಿಯುತ ಬಾಳನು ಸವೆಸುತಲಿರುತಿಹ ಮರ್ತ್ಯರೆ | ಬನ್ನಿರಿ ಬನ್ನಿರಿ ಎಲ್ಲರು ಇಲ್ಲಿಗೆ ಕೇಳಿರಿ ಜನನಿಯ ಚರಮಾದೇಶವ || “ಸತತವು ವ್ರಣವನೆ ಬಯಸುವ ಮಕ್ಷಿಕೆ, ಮಧುವನನವರತ ಹೀರುವ ಮಧುಕರ- ಆವುದು ಅನುಕರಣೀಯವು ಎಂಬುದ ಅರಿಯುತ ಮಧುಮಯವಾಗಿಸಿ ಜೀವನ!' ||

Thoughts & Reflections

0

No reflections shared yet. Be the first to share your thoughts!

Share your thought