Bhasaka
← Back to home

ಮಗನೆಂದಾಡಿಸುವಳು ಮೊಗ ನೋಡಿ ನಗುವಳು

Author: ಕನಕದಾಸCategory: ಶ್ರೀಕೃಷ್ಣRaaga: ಆನಂದ ಭೈರವಿTaala: ಆಟತಾಳ
ಮಗನೆಂದಾಡಿಸುವಳು ಮೊಗ ನೋಡಿ ನಗುವಳು ||ಪ|| ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ||ಅ|| ಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆ ಫಾಲದ ಅರಳೆಲೆಯು ಕುಣಿಯೆ ನೀಲದುಡುಗೆಯುಟ್ಟ ಬಾಲನೆ ಬಾರೆಂದು ಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ ||1|| ಬಣ್ಣ ಸರವಲ್ಲಾಡೆ ವರ ರನ್ನ ನೇವಳದ ಹೊನ್ನ ಗಂಟೆಯು ಘಣ ಘಣರೆನಲು ಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದು ಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ ||2|| ಪೊಡವಿಯ ಈರಡಿ ಮಾಡಿದ ದೇವನ ಕುಡಿಬೆರಳನೆ ಕರದಲಿ ಪಿಡಿದು ಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿ ನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ ||3|| ಕುಕ್ಷಿಯೊಳು ಈರೇಳು ಜಗವನ್ನು ಸಲಹುವನ ರಕ್ಷಿಪರು ಉಂಟೆ ತ್ರೈಜಗದೊಳಗೆ ಪಕ್ಷಿವಾಹನ ನೀನು ಅಂಜಬೇಡ ಎನುತಲಿ ರಕ್ಷೆ ಇಡುವ ಪುಣ್ಯವನೆಂತು ಪಡೆದಳಯ್ಯ ||4|| ಶಂಖ ಚಕ್ರ ಗದಾ ಪದುಮಧಾರಕನ ಪಂಕಜ ಮಿತ್ರ ಶತಕೋಟಿ ತೇಜನ ಸಂಖ್ಯೆಯಿಲ್ಲದಾಭರಣಗಳ ತೊಡಿಸಿಯ ಲಂಕರಿಸುವ ಪುಣ್ಯವೆಂತು ಪಡೆದಳಯ್ಯ ||5|| ಸಾಗರಶಯನನ ಭೋಗೀಶನ ಮೇಲೆ ಯೋಗ ನಿದ್ರೆಯೊಳಿಪ್ಪ ದೇವನನು ಆಗಮ ನಿಗಮಗಳರಸಿ ಕಾಣದ ವಸ್ತುವನು ತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ ||6|| ಪನ್ನಗ ಶಯನನ ಉನ್ನಂತ ಮಹಿಮನ ಸನ್ನುತ ಭಕುತರ ಸಲಹುವನ ಪನ್ನಗಾರಿ ವಾಹನ ದೇವರ ದೇವನಹ ಚೆನ್ನಾದಿಕೇಶವನನೆಂತು ಪಡೆದಳಯ್ಯ ||7||

Thoughts & Reflections

0

No reflections shared yet. Be the first to share your thoughts!

Share your thought