Bhasaka
← Back to home

ಮಗುವು ಕಾಣಿರಯ್ಯ ಮಾಯದ ಮಗುವು

Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ಏಕತಾಳ
ಮಗುವು ಕಾಣಿರಯ್ಯ| ಮಾಯದ | ಮಗುವು ಕಾಣಿರಯ್ಯ ||ಪ|| ಸುಗುಣ ವಾದಿರಾಜರೆ ಮೂ ಜಗವನು ತನ್ನುದರದೊಳಿಟ್ಟ ||ಅ|| ಮಾಯಾ ಪೂತನಿಯ ಕೊಂದು ಕಾಯವ ಕೆಡಹಿ ಶಕಟನ್ನ ಸಾಯಬಡಿದು ಧೇನುಕನ ವೃಷಭಾಸುರನ ನೋಯ ನೋಡದ್ಯಮಳಾರ್ಜುನಂಗೆ ಸಾಯುಜ್ಯವನೆ ಇತ್ತು ತನ್ನ ತಾಯಿಗೆ ತಾ ಮಣ್ಣ ಮೆದ್ದು ಬಾಯ ಬಿಟ್ಟು ತೋರಿಸಿದ ||1|| ಏಕವರ್ಣವಾಗಿಯೆ ಸಕಲಲೋಕವು ಆಕಾರವಳಿಯೆ ಏಕಮೇವಾದ್ವಿತೀಯನೆಂಬಾಗಮಕೆ ಸರಿಯಾಗಿ ಶ್ರೀ ಕರಾಂಬುಜದಿಂ ಪಾದಾಂಗುಲಿಯಂ ಪಿಡಿದು ಬಾಯೊಳಿಟ್ಟು ಶ್ರೀಕಾಂತ ವಟಪತ್ರದ ಮೇಲೊರಗಿ ಬ್ರಹ್ಮನ ಪಡೆದ ||2|| ಕಡಹದ ಮರನೇರಿ ಸಂಗಡಿಗರೊಡನೆ ಕಾಳಿಂದಿಯ ಮಡುವ ಧುಮುಕಿ ಧುಮುಕಿ ಕಲಕಿ ಆ ಕಾಳಿಂಗನ ಪೆಡೆಯ ತುಳಿದು ಜಡಿಯಲವನ ಮಡದಿಯರು ಬೇಡಿಕೊಳ್ಳೆ ಕಡಲಿಗಟ್ಟಿ ಬಂದು ತಾಯ ತೊಡೆಯ ಮೇಲೆ ಮಲಗಿದಂಥ ||3|| ಕಲ್ಲಿಗಟ್ಟಿ ಗೂಡೆಯಲಿ ಗೋಲಿಯ ಚೀಲವನಿಕ್ಕಿ ಹಿಲ್ಲಿ ಕಟ್ಟೋಗರ ಕಡಕಲಕ್ಕಳೆಯಾ ತುದಿಯಲಿ ನಿಲ್ಲಿಸಿ ಪೆಗಲೊಳು ಕೊಂಬು ಕೋಲನೆ ಪಿಡಿದು ಗೊಲ್ಲರೊಡಗೂಡಿ ನಮ್ಮೆಲ್ಲರ ಗೋವುಗಳ ಕಾಯ್ದ ||4|| ಶ್ರುತಿತತಿಗೆ ಗೋಚರಿಸದ ಅಚ್ಯುತನು ಭುವನಾದಿಮೂರ್ತಿ ರತಿಪತಿ ಪಿತನು ಶೇಷಾದ್ಯಾರಾಧ್ಯನು ಕ್ಷಿತಿಗಧಿಕ ವೇಲಾಪುರದ ಪತಿ ವೈಕುಂಠ ಕೇಶವನು ಯತಿಯೆ ನೀ ನೋಡಯ್ಯ ಶರಣಾಗತನ ತೊಡೆಯಿಂ ಮಾಯವಾದ ||5||

Thoughts & Reflections

0

No reflections shared yet. Be the first to share your thoughts!

Share your thought