Bhasaka
← Back to home

ಮರೆಯದಿರು ಮರೆಯದಿರು ಎಲೆ ಮಾನವ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಛಾಪುತಾಳ
ಮರೆಯದಿರು ಮರೆಯದಿರು ಎಲೆ ಮಾನವ ||ಪ|| ಗರುವವೇತಕೆ ನಿನಗೆ ಎಲೆ ಮಂಕು ಜೀವ ||ಅ|| ರೂಪದಲಿ ಮನ್ಮಥನೆ ಶಾಪದಲಿ ಗೌತಮನೆ ಕೋಪದಲಿ ದೂರ್ವಾಸ ಮುನಿಯೆ ನೀನು ತಪದಲ್ಲಿ ವ್ಯಾಸನೆ ಕೃಪೆಯಲ್ಲಿ ಬಲೀಂದ್ರನೆ ನಿಪುಣತ್ವದಲ್ಲಿ ನಾರದ ಮುನಿಯೆ ನೀನು ||1|| ಯತಿಯಲ್ಲಿ ಅಗಸ್ತ್ಯನೆ ಕ್ಷಿತಿಪರಲಿ ಜನಮೇಜಯನೆ ಗೀತದಲಿ ಗಂಧರ್ವನೇ ನೀನು ವ್ರತದಲಿ ಲಕ್ಷ್ಮಣನೆ ಮತಿಯಲ್ಲಿ ಕಶ್ಯಪನೆ ವಿತರಣ ಗುಣದಲಿ ಯಮಧರ್ಮನೆ ನೀನು ||2|| ನ್ಯಾಯದಲಿ ಭರತನೆ ಉಪಾಯದಲಿ ಕೃಷ್ಣನೇ ಕಾಯಶುದ್ಧಿಯಲಿ ಅಂಬರೀಷನೆ ನೀನು ಮಾಯದಲಿ ಕಾವ್ಯನೇ ದಾಯದಲಿ ಶಕುನಿಯೇ ನೀ ಯಾರ ಹೋಲುವೆ ಎಲೆ ಮಾನವ ||3|| ಕೊಡುವುದಕೆ ಕರ್ಣನೆ ನಡತೆಯಲಿ ಧರ್ಮಜನೆ ದೃಢ ಮನಸಿನಲಿ ರುಕ್ಮಾಂಗದನೆ ನೀನು ಪಡೆಯಲ್ಲಿ ಕೌರವನೆ ನುಡಿಯಲ್ಲಿ ಗಾಂಗೇಯನೆ ಮಡದಿಯರ ಭೋಗಕ್ಕೆ ಸುರಪತಿಯೆ ನೀನು ||4|| ಬಾಣದಲಿ ರಾಮನೇ ತ್ರಾಣದಲಿ ಭೀಮನೇ ಕೇಣದಲಿ ಶಿಶುಪಾಲನೇನೊ ಗುಣದಲಿ ಸುಧರ್ಮನೇ ರಣದಲಿ ಶಲ್ಯನೆ ಆನು ಗುಣ್ಯವಾದದಲಿ ನರಪತಿಯೆ ನೀನು ||5|| ಛಲದಲ್ಲಿ ರಾವಣನೆ ಬಲದಲ್ಲಿ ವಾಲಿಯೇ ನಿಲುಗಡೆಯ ಮನದಲ್ಲಿ ದ್ರೋಣನೇ ನೀನು ಕುಲದಲಿ ವಸಿಷ್ಠನೇ ಗೆಲುವಿನಲಿ ಪಾರ್ಥನೇ ಬಿಲುವಿದ್ಯೆಯಲಿ ಪರಶುರಾಮನೆ ನೀನು ||6|| ಶಕ್ತಿಯಲಿ ಹನುಮನೇ ಭಕ್ತಿಯಲಿ ವಿಭೀಷಣನೆ ಕೀರ್ತಿಯಲಿ ಹರಿಶ್ಚಂದ್ರರಾಯನೆ ನೀನು ಅರ್ತಿಯಲಿ ಶುಕಮುನಿಯೆ ಸ್ಫೂರ್ತಿಯಲಿ ಸೂರ್ಯನೇ ಮುಕ್ತಿ ಸಾಧನಕೆ ಪ್ರಹ್ಲಾದನೆ ನೀನು ||7|| ಗೋತ್ರದಲಿ ಬ್ರಹ್ಮನೇ ಸೂತ್ರದಲ್ಲಿ ಕೌಶಿಕನೆ ಪಾತ್ರದಲಿ ವಾಲ್ಮೀಕಿ ಋಷಿಯೆ ನೀನು ಮಾತಿನಲಿ ಗುರುಸುತನೆ ಜ್ಯೋತಿಯಲಿ ಬೃಹಸ್ಪತಿಯೆ ನೀತಿಮಾರ್ಗದಲಿ ಸಹದೇವನೇ ನೀನು ||8|| ಅಂಗದಲಿ ಅಜಮಿಳನೆ ಶೃಂಗದಲಿ ಮಾರುತನೆ ಕಂಗೊಳಿಪ ತನದಲ್ಲಿ ಕಾಮಸುತನೆ ಗಂಗೆಯನು ಪಡೆದಂಥ ನೆಲೆಯಾದಿಕೇಶವನ ಹಿಂಗದೆ ಭಜಿಸಿ ಪಾವನನಾಗು ಮನುಜ ||9||

Thoughts & Reflections

0

No reflections shared yet. Be the first to share your thoughts!

Share your thought