Bhasaka
← Back to home

ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ

Author: ಕನಕದಾಸCategory: ಶ್ರೀಕೃಷ್ಣ
ಮುಳ್ಳು ಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ ಎರಡು ಹೂಳು, ಒಂದು ತುಂಬಲೆ ಇಲ್ಲ ||1|| ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿ ಎರಡು ಗೊಡ್ಡು, ಒಂದು ಕಂದು ಹಾಕಿ ಕರುವೆ ಇಲ್ಲ ||2|| ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳಾ ಇಬ್ಬರು ಬಂಜಿಯರು, ಒಬ್ಬಾಕಿ ಹಡೆದೇ ಇಲ್ಲ ||3|| ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರು ಇಬ್ಬರು ಚೊಂಚರು, ಒಬ್ಬಗೆ ಕೈಯೇ ಇಲ್ಲ ||4|| ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಿಕಿಗಳ ಎರಡು ದದ್ದು, ಒಂದಕೆ ತಳವೆ ಇಲ್ಲ ||5|| ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕ ಎರಡು ನಕಲು, ಒಂದು ಸವಕಲು ||6|| ಸವಕಲು ರೊಕ್ಕದಾಗ ಕುಚ್ಚಲಿಕೆ ತಂದಾರ ಮೂರು ಕಡುಬ ಎರಡು ಕುದಿಯಲಿಲ್ಲ, ಒಂದು ಬೇಯಲಿಲ್ಲ ||7|| ಬೇಯದ ಕಡುಬಿಗಿ ಬಂದಾರ ಮೂವರು ಬೀಗರ ಇಬ್ಬರು ಬೊಚ್ಚರು, ಒಬ್ಬಗೆ ಹಲ್ಲೇ ಇಲ್ಲ ||8|| ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಚಿಕಣಿ ಅಡಕಿ ಎರಡು ಗೋಟು, ಒಂದು ಸಿಡಿದು ಕಾಣೆಯಾಯಿತು ||9|| ಕಾಣೆಯಾದ ಅಡಿಕಿಯ ನೋಡಾಕಂತ ಹೋಗ್ಯಾರ ಮೂರ ಮಂದಿ ಇಬ್ಬರು ಒಂಚೊರಿ, ಒಬ್ಬಗೆ ಕಣ್ಣೇ ಇಲ್ಲ ||10|| ಕಣ್ಣಿಲ್ಲದವನ ಕರೆತರಬೇಕಂತ ಹೋಗ್ಯಾರ ಮೂರ ಮಂದಿ ಇಬ್ಬರು ಕುಂಟರು, ಒಬ್ಬಗೆ ಕಾಲೇ ಇಲ್ಲ ||11|| ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ ಇಬ್ಬರು ಲಂಡರು, ಒಬ್ಬ ಮೊಂಡ ||12|| ಕಾಗಿನೆಲೆ ಕನಕದಾಸ ಹಾಕಿದ ಮುಂಡಿಗಿ ಇದ ತಿಳಿದವ ಜಾಣ, ಒಡೆದು ಹೇಳದವ ಕೋಣ ||13||

Thoughts & Reflections

0

No reflections shared yet. Be the first to share your thoughts!

Share your thought