← Back to home
ಯಮದೂತರಿನ್ನೇನು ಮಾಡುವರು ಪೇಳೊ
Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ಆಟತಾಳ
ॐ
ಯಮದೂತರಿನ್ನೇನು ಮಾಡುವರು ಪೇಳೊ
ರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ||ಪ||
ಮಂಡಲದೊಳಗೊಬ್ಬ ಜಾರಸ್ತೀಯಳು ತನ್ನ
ಗಂಡನರಿಕೆಯಿಂದ ವ್ಯಭಿಚಾರಗೈಯೆ
ಮಂಡಲಪತಿಯು ಶೋಧಿಸಿ ಹಿಡಿದೆಳೆತಂದು
ಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ ||1||
ಕಳವಿನ ಒಡವೆಯ ಒಡೆಯಗೆ ಪಾಲೀವ
ಕಳಬಂಟ ಕನ್ನವ ಕೊರೆಯುತಿರೆ
ಕಳವು ಮಾಡಿದನೆಂದು ಹಿಡಿದೆಳೆತಂದರೆ
ತಳವಾರನೇನು ಮಾಡುವನು ಕೇಳೆಲೊ ಹರಿ ||2||
ಮನವಚನದಲಿ ಮಾಡಿದ ಪಾಪ ಪುಣ್ಯಗಳ
ನಿನಗರ್ಪಿಸುವೆ ಕಾಲಕಾಲದಲಿ
ಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವ
ಎನಗೆ ಆರೇನು ಮಾಡುವರು ಕೇಳೆಲೊ ಹರಿ ||3||
Thoughts & Reflections
0No reflections shared yet. Be the first to share your thoughts!