Bhasaka
← Back to home

ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ

Author: ಕನಕದಾಸCategory: ಶ್ರೀಕೃಷ್ಣRaaga: ಭೂಪಾಲೀTaala: ಝಂಪೆತಾಳ
ಯಾಕೆ ನೀನಿಲ್ಲಿ ಪವಡಿಸಿದೆ ಹರಿಯೆ- ಜಗ ||ಪ|| ದೇಕ ವಿಖ್ಯಾತ ಪಶ್ಚಿಮ ರಂಗಧಾಮ ||ಅ|| ತಮನೊಡನೆ ಹೋರಿ ಬೆಟ್ಟವನು ಬೆನ್ನಲಿ ಪೊತ್ತು ರಮಣಿ ಭೂಮಿಯನು ತಂದಾಯಾಸವೂ ಅಮರವೈರಿಯ ಕರುಳ ಕಿತ್ತ ಕಡು ಧಾವತಿಯೊ ಕ್ಷಮೆಯನಳೆದೀ ಪಾದಕಮಲ ನೊಂದವೊ ||1|| ಪೊಡವಿಪಾಲಕರ ವಂಶವನು ವಪನ ಮಾಡಿ ಕೊಡಲಿಯನು ಬಿಸುಟು ಮಲಗಿದ ಭಾವವೊ ಮಡದಿಯನು ಕದ್ದೊಯ್ದವನ ಶಿರವನೆ ತರಿದು ಒಡಲಿನಾಯಾಸದಲಿ ಪವಡಿಸಿದ ಪರಿಯೋ ||2|| ಖೂಳ ಶಿಶುಪಾಲಾದಿ ಎದುರಾಂತ ವೀರರ ಕೊಂದು ಕಾಳಿಂಗದ ಹೆಡೆಯ ತುಳಿತುಳಿದು ಮೈಯಲಸಿತೊ ಲೀಲೆಗೋಸುಗ ಬಂದು ನಿರ್ವಾಣದಲಿ ನಿಂದು ಆ ಲಜ್ಜೆಗಾಗಿ ತಲೆ ಬಾಗಿ ಮಲಗಿದೆಯೊ ||3|| ನಾಲ್ಕು ಯುಗದಾಧಾರಿ ಕಡೆಗೆ ತುರಗವನೇರಿ ಸಾಕಾಗಿ ದಣಿದು ನೀನಿಲ್ಲಿ ಮಲಗಿದೆಯೊ ಸಾಕಾರಿಯಾಗಿ ಗೌತಮ ಮುನೀಶ್ವರನಿಗೆ ಬೇಕೆಂದು ನೀ ಕೊಟ್ಟ ವರಕೆ ಮಲಗಿದೆಯೊ ||4|| ಇನ್ನೆಷ್ಟು ಕಾಲ ನೀನಿಲ್ಲಿ ಮಲಗಿದ್ದರೂ ನಿನ್ನನೆಬ್ಬಿಸುವವರನೊಬ್ಬರನು ಕಾಣೆ ಉನ್ನಂತ ಕಾಗಿನೆಲೆಯಾದಿಕೇಶವರಾಯ ಚೆನ್ನ ಶ್ರೀರಂಗಪಟ್ಟಣದ ರಂಗಧಾಮ ||5||

Thoughts & Reflections

0

No reflections shared yet. Be the first to share your thoughts!

Share your thought