Bhasaka
← Back to home

ರಮಣಿ ಕೇಳೆಲೆ ಮೋಹನ ಶುಭಕಾಯನ

Author: ಕನಕದಾಸCategory: ಶ್ರೀಕೃಷ್ಣRaaga: ಭೈರವೀTaala: ಆಟತಾಳ
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀಕೃಷ್ಣನ ಕಮಲವದನೆ ನೀ ತೋರೆ ||ಪ|| ಬಾಯೊಳಗಿಹಳ ಗಂಡನ ನಿಜ ತಮ್ಮನ ತಾಯ ಪಿತನ ಮಡದಿಯ ಧರಿಸಿದನ ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ ದಾಯಾದಿಯ ಮಗನ ಸಾಯಕವದು ತೀವ್ರದಿ ಬರುತಿರೆ ಕಂಡು ಮಾಯಾಪತಿ ಭೂಮಿಯನೊತ್ತಿ ತನ್ನಯ ಬೀಯಗನ ತಲೆಗಾಯಿದಂಥ ರಾಯನ ಕರೆದು ತೋರೆ ||1|| ನಾಲಗೆ ಎರಡರವನ ಭುಂಜಿಸುವನ ಮೇಲೇರಿ ಬಹನ ತಂದೆ ಇಹ ಗಿರಿಯನು ಲೀಲೆಯಿಂದಲಿ ಕಿತ್ತೆತ್ತಿದ ಧೀರನ ಕಾಳೆಗದಲಿ ಕೊಂದನ ಲೋಲಲೋಚನೆಯ ಮಾತೆಯ ಪುತ್ರನಣುಗನ ಮೇಲು ಶಕ್ತಿಗೆ ಉರವನಾಂತು ತನ್ನವರನು ಪಾಲಿಸಿದಂಥ ದಾತನಹ ದೇವನ ಲೋಲೆ ನೀ ಕರೆದು ತೋರೆ ||2|| ಉರಿಯೊಳು ಜನಿಸಿದವನ ನಿಜ ತಂಗಿಯ ಸೆರಗ ಪಿಡಿದ ಖಳನಣ್ಣನ ತಂಗಿಯ ವರನ ತಲೆಯನು ಕತ್ತರಿಸಿದ ಧೀರನ ಗುರುವಿನೊಳುದಿಸಿದನ ಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನ ಕರೆದು ವರವನಿತ್ತು ಮನ್ನಿಸಿ ಸಲಹುವ ಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ ||3||

Thoughts & Reflections

0

No reflections shared yet. Be the first to share your thoughts!

Share your thought