Bhasaka
← Back to home

ಸಾಕು ಸಾಕಿನ್ನು ಸಂಸಾರ ಸುಖವು

Author: ಕನಕದಾಸCategory: ವೈರಾಗ್ಯRaaga: ಮೋಹನ
ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಉದಿಸಿದುವು ಪಂಚಭೂತಗಳಿಂದ ಓಷಧಿಗಳು ಉದಿಸಿದುದು ಓಷಧಿಗಳಿಂದನ್ನವು ಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡು ಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ ||1|| ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ ಪತನವಾದಿಂದ್ರಿಯವು ಹೊಲೆರುಧಿರವು ಸತಿಯ ಉದರದೊಳೆರಡು ಏಕತ್ರ ಸಂಧಿಸುತ ಪುತಪುತನೆ ಮಾಸ ಪರಿಯಂತ ಹರಿಯೆ ||2|| ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗ ಮಾಸ ನಾಲ್ಕರಲಿ ಚರ್ಮದ ಹೊದಿಕೆ ಮಾಸ ಐದಾರರಲಿ ನಖ ರೋಮ ನವರಂಧ್ರ ಮಾಸ ಏಳರಲಿ ಧಾತು ಹಸಿವು ತೃಷೆಯು ||3|| ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ ಗುಂಗಿನಲಿ ನಾನಿಂತು ಭವಭವದೊಳು ಅಂಗನೆಯರುದರದಲಿ ಮತ್ತೆಮತ್ತೆ ಬಂದು ಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ ||4|| ಇನಿತು ಗರ್ಭದೊಳು ನವ ಮಾಸ ಪರಿಯಂತರದಿ ತನು ಸಿಲುಕಿ ನರಕದಲಿ ಆಯಾಸಗೊಂಡು ಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದು ಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ ||5|| ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿ ಪರವಶದೊಳಿರಲು ನೀರಡಿಕೆಯಾಗಿ ಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವ ದುರಿತ ರೂಪದ ತನುವ ಧರಿಸಲಾರೆ ||6|| ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗ ಹಸಿದನಿವನೆಂದು ಹಾಲನೆ ಎರೆವರು ಹಸಿವು ತೃಷೆಯಿಂದಳಲು ಹಾಡಿ ತೂಗುವರಾಗ ಪಶು ತೆರದಿ ಶಿಶುತನದೊಳಿರಲಾರೆ ಹರಿಯೆ ||7|| ನಡೆಯಲರಿಯದ ದುಃಖ ಮನಸಿನಲಿ ಬಯಸಿದುದ ನುಡಿಯಲರಿಯದ ದುಃಖ ವಿಷಯದಿಂದ ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು ನುಡಿವ ಬಾಲ್ಯದೊಳಿರಲಾರೆ ಹರಿಯೆ ||8|| ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು ಗೋಳಿಡುತ ವಿದ್ಯೆ ಕರ್ಮಗಳ ಕಲಿತು ಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿ ಬಾಲೆಯರ ಬಯಸಿ ಮರುಳಾದೆ ಹರಿಯೆ ||9|| ಜ್ವರದ ಮೇಲತಿಸಾರ ಬಂದವೊಲು ಯೌವನದಿ ತರುಣಿಯೊಡನಾಟ ಕೂಟದ ವಿಷಯದಿ ತರುಣಿ ಸುತರ್ಗನ್ನ ವಸ್ತ್ರಾಭರಣವೆನುತ ಪರರ ಸೇವೆಯಲಿ ಘಾಡ ನೊಂದೆ ಹರಿಯೆ||10|| ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತು ಜೊತೆಗಿಂದ್ರಿಯಗಳ ರೋಗ ರುಜಿನದಲಿ ಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದ ಕತ್ತಲೆಯೊಳೀ ದೇಹ ಕರಡಾಯಿತು ||11|| ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು ಕಟ್ಟಿ ಕಾದಿಹರು, ಮುಪ್ಪಡಿಸಿದಾಗ ತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತ ಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ||12|| ಕಟ್ಟುನಿಟ್ಟಿನ ಭಾರಿ ಮೂಗುಬ್ಬಸದಿ ನೊಂದು ಕಟ್ಟಳೆಯ ದಿನ ತುಂಬಿ ಮೃತವಾಗಲು ಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳು ಮುಟ್ಟರು ಹೆಣನೆಂದು ದೂರವಿಹರು ||13|| ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದು ಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿ ಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರು ಮತ್ತೆ ಬುವಿಯಲಿ ಜನಿಸಲಾರೆ ಹರಿಯೆ ||14|| ಇನ್ನು ಈ ಪರಿಪರಿಯ ಯೋನಿ ಮುಖದಲಿ ಬಂದು ಬನ್ನವನು ಪಡಲಾರೆ ಭವಭವದೊಳು ಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿ ಸನ್ಮತಿಯೊಳಿರಿಸೆನ್ನ ಆದಿಕೇಶವರಾಯ ||15||

Thoughts & Reflections

0

No reflections shared yet. Be the first to share your thoughts!

Share your thought