Bhasaka
← Back to home

ಸಾಕು ಸಾಕು ಮನುಜಸೇವೆಯು, ರಂಗಯ್ಯ

Author: ಕನಕದಾಸCategory: ಶ್ರೀಕೃಷ್ಣRaaga: ಪಂತುವರಾಳಿTaala: ರೂಪಕತಾಳ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ||ಪ|| ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನು ಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ||ಅ|| ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದು ಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ- ರಿಕ್ತ ಹಸ್ತದಿಂದ ಮನೆಯ ಸೇರುವೆ- ಆಸೆಗಾಗಿ ಮತ್ತೆ ಕಂಡ ಕಡೆಗೆ ತೊಲಗುವೆ- ಬಂದು ಅಪರ ರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ ||1|| ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟು ಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿ ಶ್ವಾನನಂತೆ ದಿನವ ಕಳೆವೆನೊ- ದುರಾಸೆಯನ್ನು ಮನಸಿನಲ್ಲಿ ಮಡಗಿಕೊಂಡು ಕುದಿವೆನೊ ಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ ||2|| ಒಡಲಿನಾಸೆಗಾಗಿ ನೊಣನು ತುಡುಕಿಬಿದ್ದು ಜೇನುಕೊಡದಿ ಮಿಡುಕುವಂತೆ ಬಾಯಿಬಿಡುವೆ ಬಿಸರುಹಾಕ್ಷನೆ ಬಿಡಿಸು ಎನ್ನ ಬಂಧಪಾಶವ ಕಾಗಿನೆಲೆಯಾದಿಕೇಶವ ಕೊಡಿಸು ನಿನ್ನ ಭಕ್ತರ ಸಂಗವ- ಕನಕದಾಸ ನೊಡೆಯ ವೆಂಕಟಾದ್ರಿ ಮಾಧವ- ರಂಗಯ್ಯ ರಂಗ ||3||

Thoughts & Reflections

0

No reflections shared yet. Be the first to share your thoughts!

Share your thought