Bhasaka
← Back to home

ಸಾಲದೆ ನಿನ್ನದೊಂದು ದಿವ್ಯನಾಮ

Author: ಕನಕದಾಸCategory: ಶ್ರೀಕೃಷ್ಣRaaga: ಭೂಪಾಲೀTaala: ಝಂಪೆತಾಳ
ಸಾಲದೆ ನಿನ್ನದೊಂದು ದಿವ್ಯನಾಮ - ಅ ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ ರಣವನುತ್ತರಿಸಿ ಮರಣವ ತಾಳಿರೆ ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ ||1|| ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವ ಸಂತತ ನೆತ್ತರನೊರಸಿ ಬಿಸುಟೆ ತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲು ಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ ||2|| ಕ್ಷೀಣ ದೇಹವ ಬಿಡುವೆನೆಂದು ಪಾಡಂಬಟ್ಟು ತ್ರಾಣದಲಿ ಗರಳ ತೈಲವ ಸೇವಿಸೆ ವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ ||3|| ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳು ಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟು ಹೆಮ್ಮಕ್ಕಳ ಬಾಧಿಸುವುದನು ಕಂಡು ಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ ||4|| ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂ ಬೋಧಿಶಯನನೆ ವೇದಶಾಸ್ತ್ರ ಮುಖದಿ ಬಾಧಿಸುವ ದುರಿತಾಗ್ನಿಗಂಬು ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ ||5||

Thoughts & Reflections

0

No reflections shared yet. Be the first to share your thoughts!

Share your thought