Bhasaka
← Back to home

ಸಿರಿಯ ಮದವೆ ಮುಕುಂದ

Author: ಕನಕದಾಸCategory: ಶ್ರೀಕೃಷ್ಣRaaga: ಕೇದಾರಗೌಳTaala: ಛಾಪುತಾಳ
ಸಿರಿಯ ಮದವೆ ಮುಕುಂದ- ನಿನ್ನ ಚರಣ ಸೇವಕನ ಬಿನ್ನಹ ಪರಾಕೆಲೊ ದೇವ ||ಪ|| ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠ ಪಟ್ಟಣವು, ಸಿರಿಯೋಲಗವ ನಿತ್ಯದಿ ಕಟ್ಟಿ ಓಲೈಸುರಿಹ ದಾಸರನಿಮಿಷರು, ಮನ ಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ ||1|| ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿ ಯಕುತಿಯೊಳು ಲೋಕಗಳ ಸೃಜಿಸುವಂಥ ಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೊ ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ ||2|| ಬಲ್ಲಿದರಿಗೆಲ್ಲ ಬಲ್ಲಿದನೆಂಬ ಅರಿ ಹೃದಯ ದಲ್ಲಣನೆಂಬ ಬಿರುದು ಸಾಹಸ ಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನ ಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ? ||3|| ಶೇಷ ಹಾಸು ಮಂಚವು, ಗರುಡ ತುರಗವು, ಪೀತ ವಾಸದುಡುಗೆಯು, ಕೊರಳಲಿ ವೈಜಯಂತಿ ಮೀಸಲಳಿಯದ ಪುಷ್ಪ ಮಾಲೆಗಳ ಧರಿಸಿ ಜಗ ದೀಶನೆಂಬುವ ಬಿರುದ ಹೊಗಳಿಸಿಕೊಳುವ ||4|| ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆ ಶಕ್ತ ಎನ್ನನು ಕಾಯೋ ಸುಲಭದಿಂದ ಮುಕ್ತಿಯನು ಪ್ರಕಟಿಸಲು ಲೋಕದೊಳು ಭಜಕರ್ಗೆ ಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ ||5||

Thoughts & Reflections

0

No reflections shared yet. Be the first to share your thoughts!

Share your thought