Bhasaka
← Back to home

ಹ್ಯಾಂಗೆ ನೀ ದಾಸನಾದೆ ಪ್ರಾಣಿ

Author: ಕನಕದಾಸCategory: ವೈರಾಗ್ಯRaaga: ಶಂಕರಾಭರಣTaala: ಆಟತಾಳ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ||ಪ|| ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳು ಮಂಗನಂದದಲಿ ಭವ ಭಂಗವ ಪಡುವವನು ||ಅ|| ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲ ದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು ||1|| ತನುವು ತನ್ನದು ಎಂದು ತನಯ ಮಾನಿನಿಯರೆ ತನಗೆ ಗತಿಯೆಂದು ನಂಬಿರುವ ಮೂಢನೆ ||2|| ಕಾಲನ ದೂತರು ಕರುಣಸಂಪನ್ನರೆ ಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ ||3|| ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿ ಗೆಲುವಿನಿಂದಲಿ ಮೂಲ ಮಲವನಳಿಯದೆ ||4|| ಉದರಪೋಷಣೆಗಾಗಿ ಅಧಮರ ಯಾಚಿಸುತ ಮದಗರ್ವವೆಂಬುವುದ ಬದಿಯಲ್ಲಿ ಇಟ್ಟುಗೊಂಡು ||5|| ಹಿರಿಯರ ನಿಂದಿಸಿ ಹರಿದಾಸನೆನಿಸಿದೆ ಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ ||6|| ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿ ಶ್ರೀಲೋಲನ ಗುಣ ಪೊಗಳಿ ನಟಿಸದಲೆ ||7|| ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆ ಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ ||8|| ವೇದಶಾಸ್ತ್ರಗಳನು ಮೋದದಿಂದೋದದೆ ಬಾದರಾಯಣಕೃತ ಭಾಗವತ ಕೇಳದೆ ||9|| ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು ||10|| ನೇಮದಿ ಉಪವಾಸ ಆ ಮಹಾ ಏಕಾದಶಿ ಕಾಮಜನಕನನು ಪ್ರೇಮದಿ ಸ್ಮರಿಸಿದೆ ||11|| ಏಸುದಿನ ಬದುಕಿದರು ಸೂಸುವ ಪಾಪವ ಈಸಿ ದಾಟದೆ ಕಾಸುವೀಸಕೆ ಬಾಳಿದವ ||12|| ಅಂಗಳದೊಳಡಗಿಪ್ಪ ಸುಮಂಗಳ ಮೂರ್ತಿ ಪಾ ದಂಗಳ ಮನದಲಿ ಹಿಂಗದೆ ಭಜಿಸದೆ ||13|| ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆ ಅತ್ತರೆ ಬಹುದೇನೊ ಉತ್ತಮ ಫಲ ಸೂಸಿ ||14|| ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯ ಬೇಡಿದರೆ ಕೊಟ್ಟು ಕೂಡಿ ಆಡದವನು ನೀ ||15|| ಶೃಂಗಾರ ಬಯಸುತ ಬಂಗಾರದೊಡವೆಯ ಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ ||16|| ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿ ಚಿತ್ತಜನಯ್ಯನು ದೊರೆವ ಬಗೆ ಕಾಣದೆ ||17|| ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆ ಹಂಬಲಿಸಿದರಿನ್ನು ಬೆಂಬಲಕಾರುಂಟು ||18|| ದುಂಡು ನಾಮವ ಬಳಿದು ಭಂಡತನದಲಿ ಜಗದಿ ದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ ||19|| ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆ ಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ ||20|| ಭೋಗಿಶಯನನ ಪಾದ ರಾಗದಿ ಭಜಿಸದೆ ಕಾಗಿನೆಲೆಯಾದಿಕೇಶವರಾಯನೆನದೆ ||21||

Thoughts & Reflections

0

No reflections shared yet. Be the first to share your thoughts!

Share your thought