Bhasaka
← Back to home

ಅಧಮನಲ್ಲವೆ ಅವನು ಅಧಮನಲ್ಲವೆ

Author: ವಿಜಯದಾಸCategory: ಶ್ರೀಕೃಷ್ಣ
ಅಧಮನಲ್ಲವೆ ಅವನು ಅಧಮನಲ್ಲವೆ | ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ ಹೊರಳಿ ಎದ್ದು ಕುಳಿತು ಎರಡು ಕರವ ಮುಗಿದು ಜಿಹ್ವೆಯಲ್ಲಿ | ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು ||1|| ಮಡುವಿನೊಳಗೆ ಮಿಂದು ಬಂದು | ಕುಡತಿ ಜಲವ ಕೊಂಡು ರವಿಗೆ | ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು ||2|| ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು | ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು ||3|| ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ | ಸಾಲಿಗ್ರಾಮ ತೊಳೆದು ತೀರ್ಥವೆಂದು ಮಾಡಿ | ಕೊಳದ ಯಿದ್ದ ಹೀನ ನರನು ||4|| ಗಿಡದ ತೊಪ್ಪಲು ತೊಡಿಮೆ ತಂದು | ಪೊಡವಿಯರಸ ಕೇಶವನ್ನ | ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು ||5|| ಅಟ್ಟ ಅಡಿಗೆ ಎಲ್ಲ ಸಿರಿ | ವಿಠ್ಠಲನ ಮುಂದೆ ತಂದು | ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು||6|| ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ | ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು ||7|| ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ | ಸಾರಿಸಾರಿಗೆ ತಿಳಿದು ಕಂಸಾರಿ ಎನದ ಹೀನ ನರನು ||8|| ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು | ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು ||9|| ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ | ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು ||10|| ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ | ಅಲ್ಲದಿಲ್ಲ್ಲವೆಂದು ಬಂದು ಸೊಲ್ಲು ಪೇಳಿ ಬಾಳದವನು ||11||

Thoughts & Reflections

0

No reflections shared yet. Be the first to share your thoughts!

Share your thought