Bhasaka
← Back to home

ಆವ ಜನ್ಮದ ಪುಣ್ಯ ಫಲಿಸಿತೆನಗೆ

Author: ವಿಜಯದಾಸCategory: ಶ್ರೀಕೃಷ್ಣ
ಆವ ಜನ್ಮದ ಪುಣ್ಯ ಫಲಿಸಿತೆನಗೆ | ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಲವಣವನು ಸವಿದುಣಲು | ಬಲುಜನ್ಮದಲಿ ಯಿದ್ದ ಭವರಾಸಿಗಳು ಹಾರಿ ಬಯಲಾದವು| ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ | ನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ||1|| ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ | ಶೋಕವನೆ ಬಂದಿರಲು ಬೆನ್ನು ಬಟ್ಟು | ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು | ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ||2|| ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ | ಆಪತ್ತು ಕಳವಳಿಸಿ ಹಿಂದಾದವು | ಭಾಪುರೆ ಮೋಕ್ಷಮಾರ್ಗಕ್ಕೆ ಸೋಪಾನ ದೊರಕಿದವು ಏನೆಂಬೆ ಸೋಜಿಗವು ಬಲು ತೀವ್ರದಲಿ ||3|| ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ | ಅಕ್ಷಯವಾಗುವದು ಇದ್ದ ಪುಣ್ಯ | ಅಕ್ಷರ ವಂಚನಾಗಿ ಸರ್ವದಾ ಮೋಕ್ಷಸಾಧನ ಮಾಳ್ಪ ಮನಸು ಪುಟ್ಟಿತು ನೋಡಾ||4|| ಓದನವು ಉದರದಲಿ ತುಂಬಲಾಕ್ಷಣದಲ್ಲಿ | ಸಾಧುಗಳ ಸಂಗತಿ ಘಟಿಸುವದು | ಭೇದಾರ್ಥ ಜ್ಞಾನ ಬಂದೊದಗುವದು ಗುರು ಪೂರ್ಣ | ಬೋಧರಾ ಮತದಲ್ಲಿ ಲೋಲಾಡುವಾನಂದಾ ||5|| ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು | ಹಿತವಾಗಿ ಸಕಲ ಇಂದ್ರಿಯಂಗಳು | ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ | ರತಿಪತಿಪಿತನ ಪದಸೇವೆಯೊಳಗಿಪ್ಪವೊ ||6|| ಕೃಷ್ಣ ಸಂದರುಶನ ಮೃಷ್ಟಾನ ಭೋಜನ | ಕಷ್ಟನಾಶನ ಸರ್ವ ಕರ್ಮಕಧಿಕಾ | ಇಷ್ಟ ಸುಖ ಸೌಖ್ಯಕರ ಮತ್ತಾವಲ್ಲಿ ಕಾಣೆ | ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ ||7||

Thoughts & Reflections

0

No reflections shared yet. Be the first to share your thoughts!

Share your thought