Bhasaka
← Back to home

ಈ ದೇಹ ಬಲು ಸಾಧನ

Author: ವಿಜಯದಾಸCategory: ಶ್ರೀಕೃಷ್ಣ
ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ಬೆಸಸೆ ಪೇಳುತ ನಿತ್ಯ ಸಜ್ಜನರ ಒಡಗೂಡು||1|| ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು ||2|| ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನe್ಞÁನದಲಿ ನಡೆದು ಗುಣವಂತನಾಗು ||3|| ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ ||4|| ಕೊರಳು ತುಳಸೀ ಮಣೀ ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ ||5|| ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ ||6|| ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ ||7|| ವ್ರತಗಳನೆ ಬಿಡದಲಿರು ವಾರ್ಧಿಕ ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು ||8|| ಹರಿದಿನದ ಉಪವಾಸ ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು||9|| ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು||10|| ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ನಿಕರವನು ನೆನೆದು ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ||11||

Thoughts & Reflections

0

No reflections shared yet. Be the first to share your thoughts!

Share your thought