Bhasaka
← Back to home

ಊಟವನು ಮಾಡು ಬಾ ಉದಧಿಶಯನಾ

Author: ವಿಜಯದಾಸCategory: ಶ್ರೀಕೃಷ್ಣ
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಕಾಯಿಪಲ್ಲೆ ಒಂದೊಂದು ನೂರು ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು ||1|| ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು ||2|| ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು ||3|| ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು||4|| ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು||5|| ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು ||6|| ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಕೊಂಡು ರಕ್ಷಿಸಿ ಎನ್ನೆ ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು ||7||

Thoughts & Reflections

0

No reflections shared yet. Be the first to share your thoughts!

Share your thought