Bhasaka
← Back to home

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ

Author: ವಿಜಯದಾಸCategory: ಶ್ರೀಕೃಷ್ಣ
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ ||1|| ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ||2|| ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ ||3|| ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು ಮನದ ಖೇದವ ತಾಳಿ ಹರಿದು ಬಿಸುಟೆ ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು ಪುನರ್ವಸು ಸ್ಥಾನವು ಕೊಡಲಿಲ್ಲವೆ||4|| ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ ||5|| ಸೋದರಗೆ ಬುದ್ದಿಯನು ಪೇಳೆ ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ ಆ ದಿನಪ ಶಶಿವುಳ್ಳ ಪರಿಯಂತ ಕೊಡಲಿಲ್ಲವೆ ||6|| ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ ವಿತ್ತಾದಿ ದಾನಗಳು ಮಿತಿಯಿಲ್ಲದೇ ಅತ್ಯಂತ ಕೊಡುವವನ ಮೂರು ಪಾದವ ಬೇಡಿ ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ ||7|| ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ ಮಾನ ಭಂಗವ ಮಾಡಿ ಸುಲಿವುತಿರಲು ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ||8|| ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ ನಡುಗುತಲಿ ನಿನ್ನ ಪಟ್ಟಣಕೆ ಬರಲು ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ ||9|| ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ ಗುರುದಕ್ಷಿಣವ ಬೇಡೆ ಸಾಂದೀಪನು ಭರದಿಂದ ಪೋಗಿ ಕೃತಾಂತನೊಳು ಭೂ ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ ||10|| ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ ಭಜಿಸಿದರವರು ತಮ್ಮ ತಕ್ಕ ತೆರದಿ ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು ಸುಜನವಂದಿತ ಸಿರಿ ವಿಜಯವಿಠ್ಠಲನೆ||11||

Thoughts & Reflections

0

No reflections shared yet. Be the first to share your thoughts!

Share your thought