Bhasaka
← Back to home

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ

Author: ವಿಜಯದಾಸCategory: ಶ್ರೀರಾಮ
ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ||1|| ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ||2|| ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ||3|| ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ||4|| ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ||5|| ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ ದಯದಿ ರಾಮರಾಮ||6|| ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ||7|| ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ||8|| ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ||9|| ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ||10|| ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ||11|| ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ||12|| ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ ||13|| ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ||14|| ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ||15|| ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ||16|| ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ||17|| ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ||18|| ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ||19|| ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ||20|| ಜಾಹ್ನವಿಯಲ್ಲಿ ಜನಾರ್ದನನಿದ್ದಾನೆ ರಾಮರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ||21|| ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ||22|| ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ||23|| ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ||24|| ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ||25||

Thoughts & Reflections

0

No reflections shared yet. Be the first to share your thoughts!

Share your thought