Bhasaka
← Back to home

ಕೈಲಾಸವಾಸ ಗೌರೀಶ ಈಶ

Author: ವಿಜಯದಾಸCategory: ಶ್ರೀಶಿವ
ಕೈಲಾಸವಾಸ ಗೌರೀಶ ಈಶ ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿಭೂಷಣನೆ ಎನ್ನವಗುಣಗಳೆಣಿಸದಲೆ ವಿಹಿತ ಧರ್ಮದಿ ಕೊಡು ವಿಷ್ಣುಭಕುತಿಯ ಶಂಭೋ ||1|| ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಲ್ಲದೆ ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ||2|| ಭಾಗೀರಥೀಧರನೆ ಭಯವ ಪರಿಹರಿಸೈಯ ಲೇ ಸಾಗಿ ಒಲಿದು ಸಂತತ ಶರ್ವದೇವ ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ ಜಾಗುಮಾಡದೆ ಭಜಿಪ ಭಾಗ್ಯವನು ಕೊಡೋ ಶಂಭೋ||3||

Thoughts & Reflections

0

No reflections shared yet. Be the first to share your thoughts!

Share your thought