Bhasaka
← Back to home

ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ

Author: ವಿಜಯದಾಸCategory: ಶ್ರೀಕೃಷ್ಣ
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ ||1|| ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ ||2|| ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ ||3|| ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ ||4|| ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ||5|| ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು ||6|| ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ | ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು||7||

Thoughts & Reflections

0

No reflections shared yet. Be the first to share your thoughts!

Share your thought